ಬೀದರ್ | ವಿದ್ಯಾರ್ಥಿಗಳು ಅನ್ ಲೈನ್ ಗೇಮ್ ನಿಂದ ದೂರವಿದ್ದು ಸಾಧನೆಯ ಗುರಿಯೆಡೆಗೆ ಸಾಗಬೇಕು : ಸೋನು ಸೂದ್
ಬೀದರ್ : ವಿದ್ಯಾರ್ಥಿಗಳು ಅಧ್ಯಯನ ಮಾಡುವ ಸಂದರ್ಭದಲ್ಲಿ ಆನ್ ಲೈನ್ ಗೇಮ್ ಮತ್ತು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಸಾಧನೆಯ ಗುರಿಯೆಡೆಗೆ ಸಾಗಬೇಕು ಎಂದು ಖ್ಯಾತ ಚಿತ್ರನಟ ಹಾಗೂ ನಿರ್ಮಾಪಕ ಸೋನು ಸೂದ್ ತಿಳಿಸಿದರು.
ನಗರದ ನೆಹರೂ ಮೈದಾನದಲ್ಲಿ ಗುರುನಾನಕ್ ದೇವ್ ಶಾಲೆಯು ಐವತ್ತನೇ ವರ್ಷ ಪೂರೈಸಿರುವ ಪ್ರಯುಕ್ತ ಶಾಲೆ ವತಿಯಿಂದ ಆಯೋಜಿಸಿದ ಬೀದರ್ ಮ್ಯಾರಥಾನ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಧನೆ ಮಾಡಬೇಕು ಎನಿಸಿದರೆ ಇಂದೇ ಉತ್ಸಾಹದಿಂದ ಪ್ರಾರಂಭ ಮಾಡಬೇಕು. ನಾಳೆಯವರೆಗೆ ಕಾಯಬಾರದು. ತನಗಾಗಿ ಎಲ್ಲರೂ ಬದುಕುತ್ತಾರೆ. ಆದರೆ ಸಮಾಜಕ್ಕಾಗಿ, ದೇಶಕ್ಕಾಗಿ ಬದುಕುವವರ ಸಂಖ್ಯೆ ಕಡಿಮೆಯಾಗಿದೆ. ದೇಶಕ್ಕೆ ಏನಾದರೂ ಕೊಡುಗೆ ನೀಡಿ ಹೆಸರು ಉಳಿಸಿಕೊಳ್ಳಬೇಕು. ಪುಸ್ತಕ ಮುಚ್ಚುವ ವ್ಯಕ್ತಿಗಳಾಗದೆ ಪುಟಗಳನ್ನು ತೆರೆದು ಓದುವ ಆದರ್ಶ ಸಾಧಕರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಗುರುನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ರೇಷ್ಮಾ ಕೌರ್ ಮಾತನಾಡಿ, ಇಂದಿನ ಮ್ಯಾರಥಾನ್ ನಲ್ಲಿ 6 ಸಾವಿರ ಜನರು ನೊಂದಣಿ ಮಾಡಿಸಿಕೊಂಡಿದ್ದಾರೆ. ಅತ್ಯಂತ ಉತ್ಸಾಹದಿಂದ ಯಶಸ್ವಿಯಾಗಿ ಪಾಲ್ಗೊಂಡ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಮ್ಯಾರಥಾನ್ ಮುಗಿದ ನಂತರ 21 ಕಿ.ಮೀ, 10 ಕಿ.ಮೀ, 5 ಕಿ.ಮೀ ಮತ್ತು 3 ಕಿ.ಮೀ ಮ್ಯಾರಥಾನ್ ನಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿಜೇತರಿಗೆ ಮೆಡಲ್, ಟ್ರೋಫಿ, ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗುರುನಾನಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಸ್.ಬಲಬೀರಸಿಂಗ್, ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರದೀಪ್ ಗುಂಟಿ ಹಾಗೂ ಪುನೀತ್ ಸಿಂಗ್ ಸೇರಿದಂತೆ ಮ್ಯಾರಾಥಾನ್ ನಲ್ಲಿ ಭಾಗವಹಿಸಿದ ಅನೇಕರು ಉಪಸ್ಥಿತರಿದ್ದರು.