ಬೀದರ್ | ಸಾವಿರ ಮೀಟರ್ ಕನ್ನಡ ಧ್ವಜ ಯಾತ್ರೆ
ಕರ್ನಾಟಕದ ಅಭಿವೃದ್ಧಿಗಾಗಿ ಕನ್ನಡ ಹೋರಾಟಗಾರರು ರಾಜಕಾರಣಕ್ಕೆ ಬನ್ನಿ: ಪ್ರವೀಣ್ ಶೆಟ್ಟಿ ಕರೆ
ಬೀದರ್ : ನಾಡು ಅಭಿವೃದ್ಧಿಯಾಗಬೇಕಾದರೆ ಕನ್ನಡ ಹೋರಾಟಗಾರರನ್ನು ರಾಜಕಾರಣಕ್ಕೆ ತರುವುದು ಅಗತ್ಯವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರು ಕರೆ ನೀಡಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ 69ನೇ ರಾಜ್ಯೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ನಿಮಿತ್ಯ ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಗುರುವಾರ ಜರುಗಿದ ಕರ್ನಾಟಕ ರಾಜ್ಯೋತ್ಸವ ಹಾಗೂ ಜಿಲ್ಲಾಮಟ್ಟದ ಕಾಯಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಅನೇಕ ಜನ ಸಂಘಟನೆಯಲ್ಲಿ ಬಂದು ಹೆಸರು, ಹಣ ಮಾಡಿದ್ದಾರೆ. ಆದರೆ ನಮ್ಮ ಸಂಘಟನೆ ಕನ್ನಡವೇ ಮೂಲಮಂತ್ರದೊಂದಿಗೆ ಕೆಲಸ ಮಾಡುತ್ತಿದೆ. ಯಾವುದೇ ಮಂತ್ರಿ, ಉದ್ಯಮಿಗಳ ಹತ್ತಿರ ವಸೂಲಿ ಮಾಡಿಲ್ಲ ಎಂದು ಅವರು ಹೇಳಿದರು.
ಹುಲಸೂರು ಗುರುಬಸವೇಶ್ವರ ಸಂಸ್ಥಾನದ ಡಾ. ಶಿವಾನಂದ್ ಮಹಾಸ್ವಾಮೀಜಿ ಮಾತನಾಡಿ, ನಮ್ಮ ಭಾಗ ಕನ್ನಡ ಉಳಿಸಿ, ಬೆಳೆಸಲು ದೊಡ್ಡ ಕೊಡುಗೆ ನೀಡಿದೆ. ಕರ್ನಾಟಕ ಸುವರ್ಣ ಸಂಭ್ರಮವನ್ನು ನಾವು ಆಚರಿಸುತ್ತಿದ್ದರೂ ಕನ್ನಡ ಸ್ಥಿತಿ ಮಾತ್ರ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ ಎಂಬುದು ಸತ್ಯ. ಕನ್ನಡಕ್ಕೆ ಇಂಗ್ಲಿಷ್ ದೊಡ್ಡ ಸವಾಲೊಡ್ಡಿದೆ. ಕನ್ನಡಕ್ಕೆ ನುಂಗುವಷ್ಟು ಇಂಗ್ಲಿಷ್ ಬೆಳೆದಿದೆ. ಇದಕ್ಕೆ ಬ್ರೇಕ್ ಹಾಕದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.
ಜೈ ಭಾರತ್ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಸದ್ಗುರು ಹವಾ ಮಲ್ಲಿನಾಥ್ ಮಹಾರಾಜ್ ಅವರು ಸಾನ್ನಿಧ್ಯವನ್ನು, ಕರವೇ ಜಿಲ್ಲಾಧ್ಯಕ್ಷ ಪೀಟರ್ ಚಿಟಗುಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಪತ್ರಕರ್ತ ಸದಾನಂದ್ ಜೋಶಿ, ಕರವೇ ಉಪಾಧ್ಯಕ್ಷರಾದ ಶಿವರಾಜ್ ಗೌಡರು, ಉಮೇಶಗೌಡರು, ರಾಜಶೇಖರ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ಕಾರ್ಯದರ್ಶಿ ಲೋಕೇಶ್, ಪ್ರಮುಖರಾದ ಶರಣು ಗದ್ದುಗೆ, ಅಭಿಷೇಕ್ ಬಾಲಾಜಿ, ವಿರೂಪಾಕ್ಷ ಗಾದಗಿ, ವೀರಶೆಟ್ಟಿ ಖ್ಯಾಮಾ, ಪಪ್ಪು ಪಾಟೀಲ್ ಖಾನಾಪುರ, ಡಾ.ರೂಪೇಶ್ ಎಕಲಾರಕರ್, ವಿಜಯಕುಮಾರ್ ಸೋನಾರೆ, ಸುಬ್ಬಣ್ಣ ಕರಕನಳ್ಳಿ, ಸಂಜುಕುಮಾರ್ ಅತಿವಾಳ, ಹಣ್ಮು ಪಾಜಿ, ಸೈಯದ್ ನವಾಝ್, ರಮೇಶ್ ಮಳಚಾಪುರ, ಪ್ರಹ್ಲಾದ್ ಚಿಟ್ಟಾ, ಜಗನ್ನಾಥ್ ಕೌಠಾ, ಸುನೀತಾ ಮರಕಲ್, ಶಾಂತಮ್ಮ ಕರಕನಳ್ಳಿ, ಮೊಜೆಸ್, ನಾಗೇಶ್, ಗುರುರಾಜ್ ಮೇತ್ರೆ, ಬಸವರಾಜ್, ನಿಲೇಶ್ ರಾಠೋಡ್, ರಾಘುಪ್ರಿಯ ಮುಂತಾದವರು ಉಪಸ್ಥಿತರಿದ್ದರು.
ಕನ್ನಡ ಕಂಪು ಪಸರಿಸಿದ ಧ್ವಜ ಯಾತ್ರೆ :
ಕರ್ನಾಟಕ ರಕ್ಷಣಾ ವೇದಿಕೆಯಿಂದ 69ನೇ ರಾಜ್ಯೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ನಿಮಿತ್ಯ ನಗರದಲ್ಲಿ ಸಾವಿರ ಮೀಟರ್(ಒಂದು ಕಿಮೀ) ಉದ್ದದ ಕನ್ನಡ ಧ್ವಜ ಪಾದಯಾತ್ರೆ, ಭುವನೇಶ್ವರಿ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಿತು.
ಬಿವಿಬಿ ಕಾಲೇಜು ಎದುರು ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಹವಾಮಲ್ಲಿನಾಥ್ ಮಹಾರಾಜ್, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಸದಾನಂದ್ ಜೋಶಿ, ಯುವ ಮುಖಂಡ ವೀರಶೆಟ್ಟಿ ಖ್ಯಾಮಾ ಅವರು ಮೆರವಣಿಗೆಗೆ ಚಾಲನೆ ನೀಡಿದರು.
ರಂಗಮಂದಿರವರೆಗೆ ಮೆರವಣಿಗೆ ನಡೆಯಿತು. ವೇದಿಕೆ ಕಾರ್ಯಕರ್ತರು, ವಿದ್ಯಾರ್ಥಿ ಸಮೂಹ ಕನ್ನಡ ಧ್ವಜ ಹೊತ್ತು ಹೆಜ್ಜೆ ಹಾಕಿದರು. ಸಾವಿರ ಮೀಟರ್ ಉದ್ದದ ಧ್ವಜ ಈ ಮಾರ್ಗದ ಜನರಿಗೆ ಆಕರ್ಷಿಸುವ ಜೊತೆಗೆ ಕನ್ನಡದ ಕಂಪು ಹರಿಸಿತು. ಡೊಳ್ಳು, ಲಂಬಾಣಿ ನೃತ್ಯ, ವೇಷಧಾರಿಗಳ ಕುಣಿತ, ಹಲಗೆ ವಾದ್ಯ ಮೆರವಣಿಗೆಗೆ ಸಾಂಸ್ಕೃತಿಕ ವೈಭವ ನೀಡಿತು.