ಬೀದರ್ | ಯುವತಿ ಆತ್ಮಹತ್ಯೆ

ಬೀದರ್ : ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ಭಾಲ್ಕಿ ತಾಲ್ಲೂಕಿನ ಆಳಂದಿ ಗ್ರಾಮದಲ್ಲಿ ನಡೆದಿದೆ.
ಮಹಾಡೋಣಗಾಂವ್ ತಾಂಡಾದ ನಿವಾಸಿ ಪ್ರಿಯಾಂಕಾ ಚೌವ್ಹಾಣ (20) ಮೃತ ಯುವತಿ ಎಂದು ಗುರುತಿಸಲಾಗಿದೆ.
ಔರಾದ್ ತಾಲ್ಲೂಕಿನ ಮಹಾಡೋಣಗಾಂವ್ ತಾಂಡಾದವರಾದ ಯುವತಿಯ ಕುಟುಂಬಸ್ಥರು ಕಳೆದ 6 ವರ್ಷದಿಂದ ಆಳಂದಿ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ನಾಮದೇವ್ ಕಬಾಡೆ ಎನ್ನುವವರು ಇವರಿಗೆ ಮನೆ ಬಾಡಿಗೆಗೆ ನೀಡಿದ್ದರಿಂದ, ಇವರು ಮನೆ ಬಾಡಿಗೆ ಹಣವನ್ನು ನಾಮದೇವ್ ಕಬಾಡೆ ಅವರಿಗೆ ನೀಡುತ್ತಾ ಬಂದಿದ್ದರು. ಆದರೆ ಕೆಲ ದಿನಗಳಿಂದ ಪಂಡರಿನಾಥ್ ಪಾಟೀಲ್ ಹಾಗೂ ಅವರ ಮಕ್ಕಳಾದ ಅಭಿಜಿತ್ ಪಾಟೀಲ್ ಮತ್ತು ಅಶ್ವಥ್ ಪಾಟೀಲ್ ಅವರು ಈ ಮನೆ ನಮಗೆ ಸೇರಿದೆ ಮನೆ ಖಾಲಿ ಮಾಡಿ ಎಂದು ಇವರನ್ನು ದಿನಾಲೂ ಕಿರಕುಳ ನೀಡುತ್ತಿದ್ದರು ಎನ್ನಲಾಗಿದೆ.
ಕಳೆದ 6 ವರ್ಷದಿಂದ ನಾವು ಈ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ. ಈ ಮನೆಯ ಬಾಡಿಗೆಯ ದುಡ್ಡು ನಿರಂತರವಾಗಿ ನಾಮದೇವ್ ಕಬಾಡೆ ಎನ್ನುವವರಿಗೆ ನೀಡುತ್ತಾ ಬಂದಿದ್ದೇವೆ. ಆದರೆ ಇತ್ತೀಚಿಗೆ ಪಂಡರಿನಾಥ್ ಪಾಟೀಲ್ ಹಾಗೂ ಅವರ ಮಕ್ಕಳಾದ ಅಭಿಜಿತ್ ಪಾಟೀಲ್ ಮತ್ತು ಅಶ್ವಥ್ ಪಟೇಲ್ ಎನ್ನುವವರು ಮನೆ ನಮಗೆ ಸೇರಿದ್ದು, ಮನೆ ಖಾಲಿ ಮಾಡಿ ದಿನಾಲೂ ನಮಗೆ ತೊಂದರೆ ನೀಡುತ್ತಿದ್ದರು. ಮನೆ ಖಾಲಿ ಮಾಡುತ್ತೇವೆ. ಆದರೆ ನಮಗೆ ಎರಡು ದಿವಸ ಸಮಯ ನೀಡಿ ಎಂದು ನಾವು ಅವರನ್ನು ಕೇಳಿಕೊಂಡಿದ್ದೇವೆ. ಆದರೆ ನಿನ್ನೆ ನಮ್ಮ ಮನೆಯವರೆಲ್ಲ ಕೆಲಸಕ್ಕೆ ಹೋದಾಗ, ಮನೆಯಲ್ಲಿ ನನ್ನ ತಂಗಿ ಒಬ್ಬಳೇ ಇದ್ದಳು. ಆ ಸಮಯದಲ್ಲಿ ಅವರು ಬಂದು ನಮ್ಮ ತಂಗಿಗೆ ಅದೇನು ಮಾಡಿದ್ದಾರೋ ಗೊತ್ತಿಲ್ಲ. ನಮ್ಮ ತಂಗಿ ಮೃತಪಟ್ಟಿದ್ದಾಳೆ ಎಂದು ಮೃತಳ ಅಣ್ಣ ಭಂಡು ಚೌವ್ಹಾಣ್ ಅವರು ಆರೋಪಿಸಿದ್ದಾರೆ.
ಈ ಘಟನೆಗೆ ಸಂಬಂಧಪಟ್ಟಂತೆ ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.