ರಮಝಾನ್, ಹೋಳಿ ಹಬ್ಬವನ್ನು ಶಾಂತಿ, ಸಹೋದರತ್ವದಿಂದ ಆಚರಿಸಿ : ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್

ಬೀದರ್ : ಜಿಲ್ಲಾದ್ಯಂತ ರಮಝಾನ್ ಹಾಗೂ ಹೋಳಿ ಹಬ್ಬಗಳನ್ನು ಶಾಂತಿಯುತವಾಗಿ ಸಹೋದರತ್ವ ಭಾವನೆಯಿಂದ ಕೋಮು ಸೌಹಾರ್ದತೆಗೆ ಯಾವುದೇ ರೀತಿಯಲ್ಲಿ ಧಕ್ಕೆ ಬಾರದಂತೆ ಆಚರಿಸಬೇಕು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಪೂಜಾರ್ ತಿಳಿಸಿದರು.
ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಈ ಕುರಿತು ವಿವಿಧ ಸಮುದಾಯಗಳ ಗಣ್ಯರ ನಾಯಕರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹೋಳಿ ಹಬ್ಬದ ದಿನದಂದು ಮಧ್ಯಾಹ್ನ 12:30 ಗಂಟೆಯವರೆಗೆ ಎಲ್ಲರೂ ಬಣ್ಣದಾಟ ಮುಗಿಸಬೇಕು. ಈ ಸಂದರ್ಭದಲ್ಲಿ ಯಾವುದೇ ವ್ಯಕ್ತಿಗೆ ಬಣ್ಣದಿಂದ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಅದೇ ರೀತಿರಮಝಾನ್ ಹಬ್ಬದ ಪ್ರಯುಕ್ತ ಓಲ್ಡ್ ಸಿಟಿಯಲ್ಲಿ ವ್ಯಾಪಾರ ಮಾಡಲು ವ್ಯಾಪರಸ್ಥರಿಗೆ ಮೊದಲನೇ 10 ದಿನ ರಾತ್ರಿ 1 ಗಂಟೆವರೆಗೆ, ಎರಡನೇ ಹತ್ತು 10 ದಿನ ರಾತ್ರಿ 1 ಗಂಟೆವರೆಗೆ, ಮೂರನೇ 10 ದಿನ ಬೆಳಗ್ಗಿನವರೆಗೆ ಸಮಯದ ಅವಕಾಶ ಕಲ್ಪಿಸಿ ವ್ಯಾಪರಸ್ಥರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್ ಅವರು ಮಾತನಾಡಿ, ಪ್ರತಿ ವರ್ಷ ಹಿಂದು, ಮುಸ್ಲಿಂ ಬಾಂಧವರು ಪ್ರೀತಿ ಬಾಂಧವ್ಯದಿಂದ ಹಬ್ಬಗಳು ಆಚರಿಸುತ್ತಾ ಬಂದಿದ್ದೇವೆ. ಈ ವರ್ಷವು ಕೂಡ ಹಿಂದು, ಮುಸ್ಲಿಂ ಬಾಂಧವರು ಪ್ರೀತಿ, ಬಾಂಧವ್ಯದಿಂದ ಹಬ್ಬ ಆಚರಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಇರ್ಶಾದ್ ಪೈಲ್ವಾನ್, ಅಬ್ದುಲ್ ಅಜೀಜ್ ಮುನ್ನಾ, ಡಾ.ಮಕಸೂದ್ ಚಂದಾ, ಶಾಹಿನ್ ಪವೇಜ್, ಎಂ.ಕೆ.ಬೇಗ್, ನಂದಕಿಶೋರ್ ಶಮಾ, ಸೂರ್ಯಕಾಂತ್ ಶೆಟಕಾರ್, ಮನೋಹರ್ ದಂಡೆ, ಡಿವೈಎಸ್ಪಿ ಶಿವನಗೌಡ ಪಾಟೀಲ್ ಹಾಗೂ ಪೊಲೀಸ್ ಇಲಾಖೆ ಅಧಿಕಾರಿ, ವಿವಿಧ ಸಮುದಾಯದ ಮುಖಂಡರು ಸೇರಿದಂತೆ ಇತರರು ಉಪಸ್ಥಿತರಿದ್ದರು.