ಮುಖ್ಯಮಂತ್ರಿಗಳು ರಾಜ್ಯದ ಜನತೆಯ ಕ್ಷಮೆ ಯಾಚಿಸಲಿ: ಶಾಸಕ ಪ್ರಭು ಚವ್ಹಾಣ
ಪ್ರಭು ಬಿ ಚವ್ಹಾಣ
ಬೀದರ್ : ವಕ್ಫ್ ಮಂಡಳಿಯ ಹೆಸರಿನಲ್ಲಿ ರೈತರ ಜಮೀನು ಕಬಳಿಸುತ್ತಿರುವ ಕಾಂಗ್ರೆಸ್ ಸರಕಾರದ ನಡೆಯನ್ನು ಖಂಡಿಸಿ ಮಾಜಿ ಸಚಿವರು ಹಾಗೂ ಶಾಸಕ ಪ್ರಭು ಬಿ ಚವ್ಹಾಣ ಅವರ ನೇತೃತ್ವದಲ್ಲಿ ಬಿಜೆಪಿ ಮಂಡಲ ವತಿಯಿಂದ ಔರಾದ್ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಾರ್ಯಕರ್ತರು, ರೈತರು ಸೇರಿದಂತೆ ಸಾವಿರಾರು ಜನರೊಂದಿಗೆ ಪಟ್ಟಣದ ಎಪಿಎಂಸಿ ಬಳಿ ಆರಂಭವಾದ ಮೆರವಣಿಗೆ ಕನ್ನಡಾಂಬೆ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳ ಮೂಲಕ ತಾಲ್ಲೂಕು ಆಡಳಿತ ಸೌಧದ ವರೆಗೆ ತೆರಳಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಶಾಸಕರಾದ ಪ್ರಭು ಚವ್ಹಾಣ ಅವರು ಮಾತನಾಡಿ, ರೈತರಲ್ಲಿ ಆತಂಕ ಸೃಷ್ಟಿಸಿರುವ ವಕ್ಫ್ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಕೂಡಲೇ ರಾಜೀನಾಮೆ ಕೊಡಬೇಕು. ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಕ್ಷಮೆ ಯಾಚಿಸಬೇಕು ಮತ್ತು ಸ್ಪಷ್ಟನೆ ಕೊಡಬೇಕು. ಇನ್ನು ಮುಂದೆ ಯಾವುದೇ ವಕ್ಫ್ ಅದಾಲತ್ ನಡೆಸದಂತೆ ಸರಕಾರಿ ಆದೇಶ ಹೊರಡಿಸಬೇಕು ಹಾಗೂ ಇದಕ್ಕೆ ಸಂಬಂಧಿಸಿದ ಗಜೆಟ್ ಅಧಿಸೂಚನೆ ಹಿಂಪಡೆಯಬೇಕು.
ಕೇಂದ್ರ ಸರಕಾರ ತರುತ್ತಿರುವ ವಕ್ಫ್ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರಕಾರವು ಮುಂದಿನ ಅಧಿವೇಶನದಲ್ಲಿ ಒಮ್ಮತದಿಂದ ನಿರ್ಣಯವನ್ನು ಅಂಗೀಕರಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಬೇಕೆಂದು ಒತ್ತಾಯಿಸಿದರು.
ಶಾಂತಿ, ಸಾಮರಸ್ಯದ ನಾಡಾದ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಶಾಂತಿ ಸೃಷ್ಟಿಸಿದೆ. ರೈತರು ಮತ್ತು ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ಯಾವಾಗ ಯಾರ ಜಮೀನು ಹೋಗುತ್ತದೋ ಎನ್ನುವ ಭಯ ರೈತರನ್ನು ಕಾಡುತ್ತಿದೆ. ಧಾರ್ಮಿಕ ಕೇಂದ್ರಗಳು ಮತ್ತು ಪ್ರವಾಸಿ ತಾಣಗಳು, ಆಸ್ಪತ್ರೆಗಳನ್ನು ಬಿಡದೇ ಎಲ್ಲ ಆಸ್ತಿಗಳನ್ನು ವಕ್ಫ್ ಹೆಸರಿಗೆ ಮಾಡಲಾಗುತ್ತಿದೆ. ಸರಕಾರ ಯಾವಾಗ ಬೇಕಾದರೂ ಯಾರ ಜಮೀನನ್ನು ವಕ್ಫ್ ಹೆಸರಿಗೆ ಮಾಡಬಹುದು. ಹಾಗಾಗಿ ರೈತರು ಕೂಡ ಎಚ್ಚರಿಕೆ ವಹಿಸಬೇಕು. ತಮ್ಮ ಪಹಣಿಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿಜಯಪುರ ಜಿಲ್ಲೆಯಂದರಲ್ಲೇ ರೈತರ 1,500 ಎಕರೆ ಜಮೀನು ವಕ್ಫ್ ಆಸ್ತಿಯೆಂದು ಘೋಷಿಸಲಾಗಿದೆ. ಬೀದರ್ ಜಿಲ್ಲೆಯಲ್ಲಿಯೂ ಸಾವಿರಾರು ಎಕರೆ ಜಮೀನು ವಕ್ಫ್ ಬೋರ್ಡ್ ಹೆಸರಿಗೆ ಸೇರಿಸಲಾಗಿದೆ. ಔರಾದ ತಾಲ್ಲೂಕಿನ ಎಕಂಬಾ ಹೋಬಳಿಯಲ್ಲಿರುವ ಜಮಾಲಪೂರ ಗ್ರಾಮದಲ್ಲಿ ಮುಸ್ಲಿಮ್ ಮನೆಗಳೇ ಇಲ್ಲ. ಆದರೂ ಅಲ್ಲಿನ ಸರ್ವೇ ನಂ.23ರಲ್ಲಿ ಸುಮಾರು 4 ಎಕರೆ ಭೂಮಿಯನ್ನು ವಕ್ಫ್ ಆಸ್ತಿಯೆಂದು ತಿದ್ದುಪಡಿ ಮಾಡಲಾಗಿದೆ. ಇಂತಹ ಅಕ್ರಮ ಮತ್ತು ಅನ್ಯಾಯಗಳನ್ನು ಸಹಿಸುವುದಿಲ್ಲ ಎಂದು ಹೇಳಿದರು.
ಇಡೀ ರಾಜ್ಯದ ರೈತರ ಹಿತದೃಷ್ಟಿಯಿಂದ ತನ್ನ ನಿಲುವನ್ನು ತೆಗೆದುಕೊಳ್ಳಬೇಕಾಗಿದ್ದ ರಾಜ್ಯ ಸರಕಾರವು ಕೇವಲ ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಮಾಡುತ್ತಿದೆ. ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ. ನಮ್ಮ ಸರಕಾರವಿದ್ದಾಗ ಅಲ್ಪಸಂಖ್ಯಾತರಿಗಾಗಿ ಸಾಕಷ್ಟು ಯೋಜನೆಗಳನ್ನು ತಂದಿದ್ದೇವೆ. ಆದರೇ ಯಾವುದೇ ರೈತರ ಜಮೀನನ್ನು ಅಕ್ರಮವಾಗಿ ಪಡೆಯುವುದು ಸರಿಯಲ್ಲ ಎಂದರು.
ಮುಖ್ಯಮಂತ್ರಿಗಳು ಅಧಿಕಾರಿಗಳ ಸಭೆ ನಡೆಸಿ ಪಹಣಿ ಪತ್ರದಲ್ಲಿ ವಕ್ಫ್ ಆಸ್ತಿ ಎಂಬುದಾಗಿ ನಮೂದು ಮಾಡದಂತೆ ತಾತ್ಕಾಲಿಕವಾಗಿ ತಡೆ ಹಿಡಿದಿರುವುದು ಕೇವಲ ಚುನಾವಣೆಯ ತಂತ್ರಗಾರಿಕೆಯಾಗಿದೆ. ಬಿಜೆಪಿಯು ಈ ತಂತ್ರಗಾರಿಕೆಯನ್ನು ಒಪ್ಪುವುದಿಲ್ಲ. ಮುಂದಿನ ದಿನಗಳಲ್ಲಿ ರೈತರಿಗೆ ಇದು ಮರಣ ಶಾಸನವಾಗಿಯೇ ಮುಂದುವರೆಯಲಿದೆ. ಮತ್ತದೇ ರೀತಿಯ ಕೃತ್ಯಗಳನ್ನು ಕಾಂಗ್ರೆಸ್ ನಾಯಕರು ಹಾಗೂ ಕಾಂಗ್ರೆಸ್ ಸರಕಾರ ಮುಂದುವರೆಸಿದಲ್ಲಿ ಇಡೀ ರಾಜ್ಯದ ಜನತೆಯನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ ಪಾಟೀಲ, ಮಂಡಲ ಉಸ್ತುವಾರಿ ಮಹೇಶ್ವರ ಸ್ವಾಮಿ, ಮಂಡಲ ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ, ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಶಿವರಾಜ ಅಲ್ಮಾಜೆ, ಖಂಡೋಬಾ ಕಂಗಟೆ, ಮುಖಂಡರಾದ ವಸಂತ ಬಿರಾದಾರ, ಧೊಂಡಿಬಾ ನರೋಟೆ, ಝಾಕೀರ್ ಶೇಖ್, ಶಿವಾಜಿರಾವ ಪಾಟೀಲ ಮುಂಗನಾಳ, ರಮೇಶ ಉಪಾಸೆ, ರಂಗರಾವ ಜಾಧವ, ಬಸವರಾಜ ಪಾಟೀಲ ಕಮಲನಗರ, ಸಚಿನ ರಾಠೋಡ್, ಪ್ರದೀಪ ಪವಾರ್, ವೈಜಿನಾಥ ಗುಡ್ಡಾ, ಈರಾರೆಡ್ಡಿ, ಗೋವಿಂದರೆಡ್ಡಿ ಕಸಬೆ, ಸಂತೋಷ ಪೋಕಲವಾರ, ದಯಾನಂದ ಘುಳೆ, ಕೇರಬಾ ಪವಾರ, ಸಂಜು ವಡೆಯಾರ್, ಅಶೋಕ ಅಲ್ಮಾಜೆ, ಗೀತಾ ಗೌಡಾ, ಶಿವಕುಮಾರ ಪಾಂಚಾಳ, ಗಣೇಶ ಕಾರೆಗಾವೆ, ವಿಜಯಕುಮಾರ ದೇಶಮುಖ, ದೇವಾನಂದ ಪಾಟೀಲ, ಅಶೋಕ ಮೇತ್ರೆ, ಶ್ರೀಮಂತ ಪಾಟೀಲ, ನಾಗಶೆಟ್ಟಿ ಗಾದಗೆ, ಮಾದಪ್ಪ ಮಿಠಾರೆ, ರಾಜೇಂದ್ರ ಮಾಳೆ, ರಾಜೇಂದ್ರ ಶಿಂಧೆ, ಯೋಗೇಶ ಪಾಟೀಲ, ಧನಾಜಿ ಜಾಧವ, ಬಂಟಿ ರಾಂಪೂರೆ, ಶ್ರೀನಿವಾಸ ಖೂಬಾ, ಯಾದು ಮೇತ್ರೆ, ಸಚಿನ ಬಿರಾದಾರ, ರಾಜಕುಮಾರ ಸೋರಳಿ, ರವೀಂದ್ರ ರೆಡ್ಡಿ, ಪ್ರಕಾಶ ಜೀರ್ಗೆ, ಉದಯ ಸೋಲಾಪೂರೆ, ಸಂಜು ಮುರ್ಕೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.