ಬೀದರ್ ಜಿಲ್ಲೆಯಲ್ಲಿ 3-4 ದಿನ ಶೀತಗಾಳಿ : ರೆಡ್ ಅಲರ್ಟ್ ಘೋಷಣೆ
ಸಾಂದರ್ಭಿಕ ಚಿತ್ರ (Photo - PTI)
ಬೀದರ್ : ಜಿಲ್ಲಾದ್ಯಂತ ಮುಂದಿನ ಮೂರ್ನಾಲ್ಕು ದಿನಗಳವರೆಗೆ ಶೀತಗಾಳಿ ಬೀಸಲಿದ್ದು, ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಜಿಲ್ಲೆಯಲ್ಲಿ ಸಾಮಾನ್ಯ ತಾಪಮಾನಕ್ಕಿಂತ 5 ರಿಂದ 6 ಡಿಗ್ರಿ ಸೆಲ್ಸಿಯಸ್ ಕಡಿಮೆ ತಾಪಮಾನ ಇರಲಿದೆ. ಇದರಿಂದಾಗಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಸೂರ್ಯೋದಯಕ್ಕಿಂತ ಮುಂಚೆ, ಸೂರ್ಯಾಸ್ತದ ನಂತರ ವಾಕಿಂಗ್ ಮಾಡುವವರು ಬಹಳ ಎಚ್ಚರಿಕೆಯಿಂದ ಇರಬೇಕು. ದ್ವಿಚಕ್ರ ವಾಹನಗಳಲ್ಲಿ ಹೊರಗೆ ಓಡಾಡಬಾರದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ್ ಮನವಿ ಮಾಡಿದ್ದಾರೆ.
ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಹವಾಮಾನ ಸಂಪೂರ್ಣ ಬದಲಾಗಿದೆ. ಚಳಿ ಪ್ರಮಾಣ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್, ಕನಿಷ್ಠ 10 ಡಿಗ್ರಿ ಸೆಲ್ಸಿಯಸ್ ಇದೆ. ಮುಂದಿನ 3-4 ದಿನಗಳಲ್ಲಿ ಇದು 5 ರಿಂದ 6 ಡಿಗ್ರಿ ಸೆಲ್ಸಿಯಸ್ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಚಳಿಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಂಭವವಿದೆ ಎಂದು ಎಚ್ಚರಿಸಿದೆ.
ಸಾರ್ವಜನಿಕರು ಸಾಧ್ಯವಾದಷ್ಟು ಮನೆ ಬಿಟ್ಟು ಹೊರಗಡೆ ಬರಬಾರದು. ಒಂದು ವೇಳೆ ಅವಶ್ಯವಿದ್ದಲ್ಲಿ ಬೆಚ್ಚನೆಯ ಉಡುಪುಗಳಾದ ಸ್ಟೇಟರ್, ಜಾಕೇಟ್, ಉಲನ್ ಟೋಪಿ ಕಾಲು ಕುಬಸ, ಕೈ ಗ್ಲೌಸ್ ಗಳನ್ನು ಧರಿಸಬೇಕು. ವಿಶೇಷವಾಗಿ ಮಕ್ಕಳನ್ನು ಜೋಪಾನವಾಗಿಡಬೇಕು. ರೈತ ಬಾಂಧವರು ರಾತ್ರಿ ಸಮಯದಲ್ಲಿ ಹೊಲಗಳಲ್ಲಿ ತಂಗುವುದು ಮತ್ತು ಹಗಲಿನಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳದಿರಲು ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿಸಿದೆ.