ಬಿಸಿಲ ಬೇಗೆ: ಮಡಕೆಗೆ ಭಾರೀ ಬೇಡಿಕೆ

ಬೀದರ್ : ಫೆಬ್ರವರಿ ಬಂತೆಂದರೆ ಸಾಕು ಕಲ್ಯಾಣ ಕರ್ನಾಟಕದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತದೆ. ಬಿಸಿಲಿನ ತಪಮಾನ ನೀಗಿಸಲು ಬಡವರ ಫ್ರಿಜ್ ಎಂದೇ ಖ್ಯಾತಿ ಗಳಿಸಿದ ಮಡಕೆ ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಈ ತಿಂಗಳಿಂದಲೇ ಬೇಸಿಗೆ ಕಾಲ ಪ್ರಾರಂಭವಾಗಿ ಸುಡು ಬಿಸಿಲಿನಿಂದ ಜನ ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದಾರೆ. ಮಾರ್ಚ್, ಎಪ್ರಿಲ್ ಮತ್ತು ಮೇ ತಿಂಗಳಲ್ಲಂತೂ ಮೈ ಕುದಿಯುವಷ್ಟು ಬಿಸಿಲು ಈ ಭಾಗದಲ್ಲಿರುತ್ತದೆ. ಜನರು ಬಿಸಿಲಿನ ತಾಪಮಾನದಿಂದ ಬಚಾವಾಗಲು ತಂಪು ಪಾನೀಯ, ಕಲ್ಲಂಗಡಿ, ಕಬ್ಬಿನ ಹಾಲು ಈ ತರಹದ ತಣ್ಣಗಿರುವ ಪದಾರ್ಥಗಳ ಮೊರೆ ಹೋಗುತ್ತಾರೆ. ಮುಖ್ಯವಾಗಿ ಬೇಸಿಗೆ ಕಾಲದಲ್ಲಿ ಅತೀ ಹೆಚ್ಚು ಬಾಯಾರಿಕೆ ಆಗುವುದರಿಂದ ಜನರು ಯಾವಾಗಲೂ ತಂಪಾದ ನೀರು ಬಯಸುತ್ತಾರೆ.
ತಂಪಾದ ನೀರಿಗಾಗಿ ಶ್ರೀಮಂತರು ಫ್ರಿಜ್ ಬಳಸಿದರೆ, ಫ್ರಿಜ್ ಖರೀದಿಸಲು ಆಗದೆ ಇರುವ ಬಡವರು, ಬಡವರ ಫ್ರಿಜ್ ಎಂದೇ ಖ್ಯಾತಿ ಪಡೆದ ಮಣ್ಣಿನ ಮಡಕೆ ಖರೀದಿಸುತ್ತಾರೆ. ಈಗ ಬಿಸಿಲಿನ ತಾಪಮಾನ ಹೆಚ್ಚಾದ ಕಾರಣ ಬೀದರ್‌ನ ಪ್ರಮುಖ ಬೀದಿ ಬೀದಿಗಳಲ್ಲಿ ಮಡಕೆ ಮಾರಾಟ ಮಾಡುವುದನ್ನು ನಾವು ನೋಡಬಹುದಾಗಿದೆ.
ಚಿಕ್ಕ ಮಡಕೆಯಿಂದ ದೊಡ್ಡ ಪ್ರಮಾಣದ ಮಡಕೆಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಅದರ ಗಾತ್ರಕ್ಕೆ ತಕ್ಕಂತೆ ಬೆಲೆಯೂ ಇದೆ. ಸುಮಾರು 200 ರೂ. ಯಿಂದ 500 ರೂ.ವರೆಗೆ ಮಡಕೆಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.
ಇತ್ತೀಚಿಗೆ ಮಣ್ಣಿನ ಮಡಕೆಗಳು ಸಿಗುವುದು ಅತೀ ವಿರಳ. ಅದು ಬೇಸಿಗೆಯಲ್ಲಿ ಮಾತ್ರ ಅವು ನಮ್ಮ ಕಣ್ಣಿಗೆ ಕಾಣುತ್ತವೆ. ಫ್ರಿಜ್‌ಗಳ ಬಳಕೆಯಿಂದ ಮಡಕೆಗಳ ಬಳಕೆ ಕಡಿಮೆಯಾಗುತ್ತಿವೆ.
ಮಣ್ಣಿನ ಮಡಕೆಯಿಂದ ವಾತಾವರಣದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬಿರುವುದಿಲ್ಲ. ಮಡಕೆ ನಿಸರ್ಗದ ಆಪ್ತ ಗೆಳೆಯ ಎಂದು ಹೇಳಬಹುದು. ಮಡಕೆಯಲ್ಲಿ ಚಿಕ್ಕ ಚಿಕ್ಕ ರಂಧ್ರಗಳಿರುವುದರಿಂದ ತಣ್ಣನೆಯ ಗಾಳಿ ಮೂಲಕ ನೀರನ್ನು ನೈಸರ್ಗಿಕವಾಗಿ ತಂಪು ಮಾಡುತ್ತದೆ. ಇದರಲ್ಲಿನ ನೀರು ಕುಡಿಯುವುದರಿಂದ ಆರೋಗ್ಯ ಕೂಡ ಸಮತೋಲನದಲ್ಲಿ ಇಡಬಹುದಾಗಿದೆ.
ನಗರದ ನೆಹರೂ ಕ್ರೀಡಾಂಗಣದ ಹತ್ತಿರವಿರುವ ಪ್ರಮುಖ ರಸ್ತೆ ಬದಿಯಲ್ಲಿ ಮಡಕೆ ಮಾರುತ್ತಿರುವ ವ್ಯಾಪಾರಸ್ಥರಿಗೆ ಮಾರುಕಟ್ಟೆಯ ನಿಗದಿತ ಸ್ಥಳ ಇಲ್ಲದಾಗಿದೆ. ಪ್ರಮುಖ ರಸ್ತೆಯ ಫುಟ್‌ಪಾತ್‌ಗಳೇ ಇವರ ಮಾರುಕಟ್ಟೆಯಾಗಿದೆ. ಹಲವಾರು ಬಾರಿ
ರಸ್ತೆ ಬದಿಯಲ್ಲಿರುವ ನಮ್ಮ ತೆರೆದ ಅಂಗಡಿಗಳು ತೆರವುಗೊಳಿಸಲಾಗಿತ್ತು. ನಮಗೆ ಮಾರುಕಟ್ಟೆ ಇಲ್ಲದಾಗಿದೆ ಎಂದು ಕುಂಬಾರರು ಹೇಳುತ್ತಾರೆ. ಸರಕಾರ ಇತ್ತ ಗಮನ ಹರಿಸಿ ಇವರಿಗೆ ಮಾರುಕಟ್ಟೆ ನಿರ್ಮಿಸಿ ಕೊಟ್ಟರೆ ಅನುಕೂಲವಾಗುತ್ತದೆ.
ಮಡಕೆಯಲ್ಲಿ ನೀರು ತಂಪಾಗಿರುತ್ತವೆ. ಫ್ರಿಜ್‌ಗಿಂತ ಮಡಕೆಯಲ್ಲಿನ ನೀರು ಉತ್ತಮ ಹಾಗೂ ರುಚಿಯಾಗಿರುತ್ತವೆ. ಬೇಸಿಗೆಯಲ್ಲಿ ತಂಪಾದ ನೀರಿಗಾಗಿ ಮಡಕೆ ಖರೀದಿ ಮಾಡಿದ್ದೇನೆ.
-ಬಸವರಾಜ್ ಸಂಗೊಳಗಿ, ಗ್ರಾಹಕ
ಮಣ್ಣಿನ ಮಡಕೆ, ಪಾತ್ರೆ ಬಳಸುವುದರಿಂದ ರೋಗಗಳನ್ನು ತಡೆಗಟ್ಟಬಹುದು. ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿ ಊಟ ಮಾಡುವವರು, ಮಡಕೆಯಲ್ಲಿನ ನೀರು ಕುಡಿಯುವವರು ಆರೋಗ್ಯವಂತರಾಗಿ ಇರುತ್ತಾರೆ. ಹೀಗಾಗಿ ಜನರು ಮಣ್ಣಿನಿಂದ ತಯಾರಿಸಿದ ವಸ್ತುಗಳು ಹೆಚ್ಚಾಗಿ ಬಳಸಬೇಕು. ಸರಕಾರ ಕುಂಬಾರಿಕೆ ವೃತ್ತಿ ಮಾಡುವ ಯುವಕರಿಗೆ ತರಬೇತಿ ನೀಡಿ ಪ್ರೋತ್ಸಾಹ ಮಾಡಬೇಕು.
-ಜಗನ್ನಾಥ್ ಕುಂಬಾರ, ನೌಬಾದ್
ಲೋಹದ ಪಾತ್ರೆ ಹಾಗೂ ಫ್ರಿಜ್ ಹೆಚ್ಚಾಗಿ ಬಳಸಲಾಗುತ್ತಿರುವ ಕಾರಣ ಕುಂಬಾರಿಕೆ ವೃತ್ತಿ ಇತ್ತೀಚಿಗೆ ಕಡಿಮೆಯಾಗುತ್ತಿದೆ. ಮಡಕೆ ಮಾಡುವುದಕ್ಕೆ ಮಣ್ಣಿನ ಕೊರತೆ ಇದ್ದು, ಸಾವಿರಾರು ದುಡ್ಡು ನೀಡಿ ನಾವು ಮಣ್ಣನ್ನು ಖರೀದಿಸಬೇಕಾಗಿದೆ. ಇದರಿಂದಾಗಿ ನಮಗೆ ಆರ್ಥಿಕ ಹೊರೆ ಬೀಳುತ್ತಿದೆ. ಸರಕಾರ ನಮ್ಮತ್ತ ಗಮನಹರಿಸಿ, ನಮ್ಮ ಕೆಲಸದ ಮಣ್ಣಿಗೋಸ್ಕರ ಭೂಮಿ ನೀಡಬೇಕು.
-ಲಲಿತಾ ಕುಂಬಾರ, ನೌಬಾದ್