ಅಂಬೇಡ್ಕರ್ ಗೆ ಅವಮಾನ: ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಬೀದರ್ ಭಾಗಶಃ ಸ್ತಬ್ಧ
ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್ ವಾದಿಗಳ ಹೋರಾಟ ಸಮಿತಿ ನೀಡಿದ್ದ ಬಂದ್ ಕರೆಗೆ ಪೂರಕ ಸ್ಪಂದನ
ಬೀದರ್: ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಸಂಸತ್ ನಲ್ಲಿ ಅವಮಾನಕರ ಹೇಳಿಕೆ ನೀಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್ ವಾದಿಗಳ ಹೋರಾಟ ಸಮಿತಿ ನೀಡಿದ್ದ ಬೀದರ್ ಬಂದ್ ಕರೆಗೆ ಪೂರಕ ಸ್ಪಂದನ ವ್ಯಕ್ತವಾಗಿದೆ.
ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದರಿಂದ ಇಂದು ಬೀದರ್ ಭಾಗಶಃ ಸ್ತಬ್ಧವಾಗಿದೆ. ನಗರದ ಮೆಡಿಕಲ್, ಆಸ್ಪತ್ರೆ ಹಾಗೂ ಸರಕಾರಿ ಕಚೇರಿಗಳು ಬಿಟ್ಟರೆ ಉಳಿದೆಲ್ಲ ಅಂಗಡಿಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿವೆ. ಸರಕಾರಿ ಬಸ್ಸುಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರಿಂದ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ಕೆಲವೊಂದು ಖಾಸಗಿ ವಾಹನಗಳು ಬಿಟ್ಟರೆ ಯಾವುದೇ ವಾಹನಗಳು ಬೀದಿಗೆ ಇಳಿದಿಲ್ಲ.
ನೌಬಾದ್, ಶಿವನಗರ, ಅಂಬೇಡ್ಕರ್ ವೃತ್ತ, ಬಸವೇಶ್ವರ್ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳು ಜನಗಳಿಲ್ಲದೇ ಖಾಲಿ ಖಾಲಿಯಾಗಿ ಕಾಣುತ್ತಿವೆ.
ನಗರದಾದ್ಯಂತ ಅಂಗಡಿ ಮುಂಗಟ್ಟುಗಳಿಗೆ ಕಳೆದ ರಾತ್ರಿಯೇ ದಲಿತ ಸಂಘಟನೆಯ ಮುಖಂಡರು ಭೇಟಿ ನೀಡಿ ಅಂಗಡಿಗಳನ್ನು ಸ್ವ ಇಚ್ಛೆಯಿಂದ ಮುಚ್ಚಿ ಸಹಕರಿಸುವಂತೆ ಕೋರಿದ್ದರು. ಅದರಂತೆ ಇಂದು ನಗರದಲ್ಲಿ ಎಲ್ಲ ಅಂಗಡಿಗಳು ಮುಚ್ಚಲ್ಪಟ್ಟಿವೆ.
ಅಮಿತ್ ಶಾ ಪ್ರತಿಕೃತಿ ಸುಟ್ಟು ವಿದ್ಯಾರ್ಥಿಗಳಿಂದ ಆಕ್ರೋಶ
ನಗರದ ನೌಬಾದ್ ವಸತಿ ನಿಲಯದ ವಿದ್ಯಾರ್ಥಿಗಳು ಅಮಿತ್ ಶಾ ಅವರ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು.
ಇಂದು ಬೆಳಗ್ಗೆ ನೌಬಾದ್ ವಸತಿ ನಿಲಯದ ವಿದ್ಯಾರ್ಥಿಗಳು ಅಮಿತ್ ಶಾ ವಿರುದ್ಧ ಘೋಷಣೆ ಕೂಗುತ್ತಾ, ತಮ್ಮ ವಸತಿ ನಿಲಯದಿಂದ ನೌಬಾದ್ ನ ಬಸವೇಶ್ವರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಸವೇಶ್ವರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಅಮಿತ್ ಶಾ ಅವರ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು.