ಸಂವಿಧಾನದ ಆಶಯಗಳ ಮೇಲೆ ಗದಾಪ್ರಹಾರ ಆತಂಕಕಾರಿ: ಜೀವನಹಳ್ಳಿ ವೆಂಕಟೇಶ್
"ನಮ್ಮದು ಪ್ರೀತಿಯ ಭಾರತವೇ ಹೊರತು ದ್ವೇಷದ ಭಾರತವಲ್ಲ"
ಬೀದರ್ : ‘ಇತ್ತಿಚಿನ ದಿನಗಳಲ್ಲಿ ಸಂವಿಧಾನದ ಆಶಯಗಳ ಮೇಲೆಯೇ ಗದಾಪ್ರಹಾರ ನಡೆಯುತ್ತಿರುವುದು ಆತಂಕಕಾರಿ ವಿಷಯ. ಎಲ್ಲ ವರ್ಗದ ಜನರಿಗೂ ರಕ್ಷಣೆ ಕೊಡಲು ಸಂವಿಧಾನವೇ ಆಧಾರಸ್ಥಂಭ. ಆದರೆ, ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಒಡೆದು-ಆಳುವ ಕೃತ್ಯಗಳು ನುಸುಳದಂತೆ ಕಾಪಾಡುವ ಅಗತ್ಯವಿದೆ’ ಎಂದು ದಸಂಸ ರಾಜ್ಯ ಸಂಚಾಲಕ ಜೀವನಹಳ್ಳಿ ಆರ್.ವೆಂಕಟೇಶ್ ತಿಳಿಸಿದ್ದಾರೆ.
ಬುಧವಾರ ಬೀದರ್ ಜಿಲ್ಲೆಯ ಹುಮ್ನಾಬಾದ್ ನಗರದ ಥೇರ ಮೈದಾನದಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗದಂತೆ ನೋಡಿಕೊಳ್ಳಲು ಶ್ರಮಿಸಬೇಕಿದೆ. ಸರ್ವಧರ್ಮ ಸಮನ್ವಯ ಇಲ್ಲದ ಶಾಸಕಾಂಗ ವ್ಯವಸ್ಥೆಯಿಂದ ದೇಶದ ಪ್ರಗತಿಚಕ್ರ ದಿಕ್ಕು ತಪ್ಪುವ ಸಾಧ್ಯತೆ ಇರುತ್ತದೆ. ನಮ್ಮದು ಪ್ರೀತಿಯ ಭಾರತವೇ ಹೊರತು ದ್ವೇಷದ ಭಾರತವಲ್ಲ ಎಂದು ನುಡಿದರು.
ದೇಶಕ್ಕೆ ಸಂವಿಧಾನವೇ ಬಹುದೊಡ್ಡ ಶಕ್ತಿ ನಮ್ಮ ಸಂವಿಧಾನ ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನು. ನಾವು ಎದುರಿಸುತ್ತಿರುವ ಸಮಸ್ಯೆ-ಸವಾಲುಗಳಿಗೆ ಸಂವಿಧಾನವೇ ಸರಿಯಾದ ದಾರಿ. ಕೋಮುವಾದ ಫ್ಯಾಶಿಸ್ಟ್ ಶಕ್ತಿಗಳು ರಾಜಕೀಯ ಅಧಿಕಾರದಿಂದ ದೂರವಿಟ್ಟರೆ ಮಾತ್ರ ಪ್ರಜಾಪ್ರಭುತ್ವ ಸುರಕ್ಷಿತವಾಗಿ ಬೆಳೆಯುತ್ತದೆ ಎಂದು ಅವರು ಹೇಳಿದರು.
ಎಲ್ಲಿಯವರೆಗೆ ನಮ್ಮ ಸಂಸತ್ ಕಟ್ಟಡದೊಳಗೆ ಸಂವಿಧಾನದ ಹಿರಿಮೆ ಎತ್ತಿ ಹಿಡಿಯಲ್ಪಡುತ್ತದೆಯೋ ಅಲ್ಲಿಯವರೆಗೆ ಅದರ ಘನತೆ ಗೌರವಗಳು ತಲೆಯೆತ್ತಿ ನಿಂತಿರುತ್ತದೆ. ನಾವು ಸುರಕ್ಷಿತವಾಗಿ ಬದುಕಲು ನಮಗೋಸ್ಕರ ನಮ್ಮ ಮುಂದಿನ ತಲೆಮಾರಿಗೆ ನಮ್ಮ ಸಂವಿಧಾನವನ್ನು ಅದರ ಆಶಯಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
‘ಸಂವಿಧಾನದ ಆಶಯಗಳು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳು ಕುಸಿಯುತ್ತಿವೆ ಸಾಮಾಜಿಕ ನ್ಯಾಯ ಕನ್ನಡಿಯ ಗಂಟಾಗಿದೆ. ನಿರುದ್ಯೋಗ ಯುವಜನಾಂಗವನ್ನು ಹತಾಶೆಗೆ ದೂಡಿದೆ. ಜಾತಿಯ ಹೆಸರಿನಲ್ಲಿ ಶೋಷಣೆ ಅಪಮಾನ ಪಾಳೇಗಾರಿಕೆ ವಿಜೃಂಭಿಸುತ್ತಿದೆ ಎಂದ ಅವರು, ನಮ್ಮ ದೇಶ ಬಹುಸಂಸ್ಕೃತಿ ಬಹುಭಾಷೆ ಧರ್ಮಗಳ ಒಳಗೊಂಡ ಸೌಹಾರ್ದ ಸಮ್ಮೇಳನದ ದೇಶವಾಗಿದ್ದು ಆದರೆ ಕೋಮುವಾದಿಗಳು ಏಕ ಸಂಸ್ಕೃತಿಯ ಜಪ ಮಾಡುತ್ತಿದ್ದಾರೆ ಎಂದು ದೂರಿದರು.
‘ಕಾರ್ಮಿಕರು ದಲಿತರು, ಮಹಿಳೆಯರನ್ನು ಒಳಗೊಂಡಂತೆ ದೇಶದ ಎಲ್ಲ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದುರ್ಬಲ ಜನ ಸಮುದಾಯದ ಪಾಲಿಗೆ ಸಂವಿಧಾನದ ಆಶಯಗಳು ಇನ್ನೂ ಕನ್ನಡಿಯೊಳಗಿನ ಗಂಟಾಗಿದೆ. ಸಂವಿಧಾನ ಎಷ್ಟೇ ಉತ್ತಮವಾಗಿರಲಿ ಅದನ್ನು ನಿರ್ವಹಿಸುವವರು ಕೆಟ್ಟವರಾಗಿದ್ದರೆ ಅದು ಕೆಟ್ಟದಾಗುವುದು ಖಂಡಿತ ಎಂಬ ಡಾ.ಅಂಬೇಡ್ಕರ್ ಅವರ ಮಾತುಗಳನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಅವರು ತಿಳಿಸಿದರು.