ಖರ್ಗೆ ಅವರೇ ನಿಮಗೆ ತಾಕತ್ತು ಇದ್ದರೆ ರಾಜ್ಯದಲ್ಲಿ ದಲಿತರನ್ನು ಮುಖ್ಯಮಂತ್ರಿಯಾಗಿ ಮಾಡಿ : ಸಂಸದ ಗೋವಿಂದ್ ಕಾರಜೋಳ್

ಬೀದರ್ : ಖರ್ಗೆ ಅವರೇ ನಿಮಗೆ ತಾಕತ್ತು ಇದ್ದರೆ ದಲಿತರನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಚಿತ್ರದುರ್ಗದ ಸಂಸದ ಗೋವಿಂದ್ ಕಾರಜೋಳ್ ಸವಾಲು ಹಾಕಿದ್ದಾರೆ.
ಸರ್ಕಾರ ಎಸ್ ಸಿ ಎಸ್ ಪಿ ಮತ್ತು ಟಿ ಎಸ್ ಪಿ ಹಣ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ಇಂದು ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಮಲ್ಲಿಕಾರ್ಜುನ್ ಖರ್ಗೆ ಅವರು ನಾಮಮಾತ್ರಕ್ಕೆ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದಾರೆ. ಅಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಸೋನಿಯಾ ಗಾಂಧಿಯವರು ಸರ್ವಾಧಿಕಾರಿಗಳಾಗಿದ್ದಾರೆ. ಅವರ ಅಣತಿಯಂತೆ ಕಾಂಗ್ರೆಸ್ ನಡೆಯುತ್ತದೆ. ಅದು ಖರ್ಗೆಯವರ ಅಣತಿಯಂತೆ ನಡೆಯುವುದಿಲ್ಲ.
ಖರ್ಗೆ ಅವರೇ ನೀವು 50 ವರ್ಷದ ರಾಜಕಾರಣದಲ್ಲಿ ಶಾಸಕ, ವಿರೋಧ ಪಕ್ಷದ ನಾಯಕ ಹಾಗೂ ಮಂತ್ರಿಯಾಗಿ ಕೆಲಸ ಮಾಡಿದ್ದೀರಿ. ನಿಮಗೆ ಬಾಬಾ ಸಾಹೇಬರು ದೊಡ್ಡ ಅವಕಾಶ ಕೊಟ್ಟಿದ್ದಾರೆ. ಇವಾಗ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದೀರಿ. ನಿಮಗೆ ತಾಕತ್ತು ಇದ್ದರೆ ಕರ್ನಾಟಕ ರಾಜ್ಯದಲ್ಲಿ ದಲಿತರನ್ನು ಮುಖ್ಯಮಂತ್ರಿಯಾಗಿ ಮಾಡಿ. ಆ ತಾಕತ್ತು ನಿಮ್ಮಲ್ಲಿ ಇಲ್ಲ. ಅದನ್ನು ಮಾಡುವುದಕ್ಕೆ ಅವರು ಬಿಡುವುದಿಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆಯಿತು. ರಾಜ್ಯದ ಜನತೆಗೆ ಎಲ್ಲಾ ಫ್ರೀ ಕೊಡ್ತೀವಿ ಎಂದು ಹೇಳಿದ್ದರು. ಆದರೆ ನಮ್ಮ ಬಸವರಾಜ್ ಬೊಮ್ಮಾಯಿ ಅಧಿಕಾರದಲ್ಲಿದ್ದಾಗ ಉಚಿತವಾಗಿ ವಿದ್ಯುತ್ ನೀಡುವುದನ್ನೇ ಈಗಲೂ ಮುಂದುವರೆಸಿಕೊಂಡು ಬರುತ್ತಿದ್ದಾರೆ. ನರೇಂದ್ರ ಮೋದಿ ಅವರು ಕೊಡುವಂತಹ 5 ಕೆಜಿ ಅಕ್ಕಿಗೆ ಚೀಲ ಹಾಕಿ ಅದರ ಮೇಲೆ ತಮ್ಮ ಫೋಟೋ ಹಾಕಿಕೊಂಡು ಅಕ್ಕಿ ಉಚಿತವಾಗಿ ಕೊಡುತ್ತಿದ್ದೇವೆ ಎಂದು ಹೇಳುತ್ತಾ, ಬಡವರಿಗೆ ಮೋಸ ಮಾಡುತ್ತಿದ್ದಾರೆ.
ದಿನಗೂಲಿ ಮಾಡುವವರಿಗೆ ಮೂರು ತಿಂಗಳಿಂದ ವೇತನವಿಲ್ಲ. ಕಲಾವಿದರಿಗೆ ಮಾಶಾಸನ ನಿಲ್ಲಿಸಿದ್ದಾರೆ. ಯಾವುದೂ ಕೂಡ ಇಲ್ಲಿ ಸರಿಯಾಗಿ ನಡೆಯುತ್ತಿಲ್ಲ. ಈ ರೀತಿ ರಾಜ್ಯ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಕಿಡಿ ಕಾರಿದ್ದರು.
ಚುನಾವಣೆ ಸಂದರ್ಭದಲ್ಲಿ ವಾಲ್ಮೀಕಿ ನಿಗಮದಲ್ಲಿನ 187 ಕೋಟಿ ರೂ. ನಕಲಿ ಅಕೌಂಟ್ ತೆಗೆದು ಹಣ ವಿಥ್ ಡ್ರಾ ಮಾಡಿ ಲೋಕಸಭೆ ಚುನಾವಣೆಯಲ್ಲಿ ಹಂಚಿದ್ದಾರೆ. ಸಿದ್ದರಾಮಯ್ಯನವರೇ ನಿಮಗೆ ಮುಖ್ಯಮಂತ್ರಿ ಆಗಿ ಮುಂದುವರಿಯುವುದಕ್ಕೆ ಯಾವ ನೈತಿಕತೆ ಇದೆ ಎಂದು ಖಾರವಾಗಿ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಶಾಸಕ ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್, ಬಿಜೆಪಿ ಮುಖಂಡ ಅಶ್ವಥ್ ನಾರಾಯಣ, ಬಸವರಾಜ್ ಆರ್ಯ, ಅಂಬರಾಯ್ ಅಷ್ಟಗಿ, ಈಶ್ವರಸಿಂಗ್ ಠಾಕುರ್ ಹಾಗೂ ಲಲಿತಾ ನಾಯಕ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.