ಶೀಘ್ರದಲ್ಲೆ ಭೂ ದಾಖಲೆಗಳ ಡಿಜಿಟಲೀಕರಣ ಮಾಡಲಾಗುವುದು : ಈಶ್ವರ್ ಖಂಡ್ರೆ
ಬೀದರ್ : ಜಿಲ್ಲಾಡಳಿತವು ಲಕ್ಷಾಂತರ ಭೂ ದಾಖಲೆಗಳು ಡಿಜಿಟಲೀಕರಣ ಮಾಡಲು ಸಜ್ಜಾಗಿದೆ. ಈಗಾಗಲೇ ದಾಖಲೀಕರಣ ಮಾಡಿಕೊಳ್ಳುವಂತಹ ಪ್ರಕ್ರಿಯೇ ಪ್ರಾರಂಭವಾಗಿದ್ದು, ಇನ್ನು 2-3 ತಿಂಗಳೊಳಗಾಗಿ ಭೂ ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಇಂದು ಭಾಲ್ಕಿಯ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ʼಭೂ ಸುರಕ್ಷಾ ಇ-ಖಜಾನೆʼ (ತಾಲ್ಲೂಕು ಕಛೇರಿ, ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣ) ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಕಚೇರಿಗಳಲ್ಲಿ ದಾಖಲೆಗಳು ನಾಪತ್ತೆಯಾಗುವುದು, ತಿದ್ದುಪಡಿಯಾಗುವುದು ಹಾಗೂ ಸುಟ್ಟು ಹೋಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ನಮ್ಮ ಸರ್ಕಾರ ಸುರಕ್ಷಿತವಾದ ಭೂದಾಖಲೆಗಳ ಜಾರಿಗೆ ಮಾಡಿ ಕೆಪಿಎಸ್ಸಿ ಅಂತಾ ಡಿವೈಸ್ ಮಾಡಿದ್ದಾರೆ ಎಂದು ಹೇಳಿದರು.
ದಾಖಲೆಗಳ ಡಿಜಿಟಲೀಕರಣ ಮಾಡುವುದರ ಜೊತೆಗೆ ಮ್ಯಾನವಲ್ ಕೂಡ ದೊರಕಲಿದೆ. ʼಎʼ ವರ್ಗದ ದಾಖಲೆಗಳು ಶಾಶ್ವತವಾಗಿರಲಿವೆ. ʼಬಿʼ ವರ್ಗದ ದಾಖಲೆಗಳು 30 ವರ್ಷ ಇರಲಿವೆ. ʼಸಿʼ ವರ್ಗದ ದಾಖಲೆಗಳು 10 ವರ್ಷಗಳು ಉಳಿಯಲಿವೆ ಎಂದು ತಿಳಿಸಿದರು.
ಈ ಯೋಜನೆಯಿಂದ ಮಧ್ಯವರ್ತಿಗಳ ಮತ್ತು ಭ್ರಷ್ಟಾಚಾರ ಕೂಡ ತಪ್ಪಲಿದೆ. ಸಾರ್ವಜನಿಕರಿಗೆ ಅನುಕೂಲವಾಗಲು ಈ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಜಿ.ಮೂಳೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಸಹಾಯಕ ಆಯುಕ್ತರಾದ ಎಂ.ಡಿ.ಶಕೀಲ್, ಮುಕುಲ್ ಜೈನ್, ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ, ತಹಸೀಲ್ದಾರ್ ಮಲ್ಲಿಕಾರ್ಜುನ್ ವಡ್ಡನಕೇರಿ, ಪಲ್ಲವಿ ಬೆಳಕೇರಿ, ಪುರಸಭೆ ಅಧ್ಯಕ್ಷ ಶಶಿಕಲಾ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಣಮಂತ್ ಚವ್ಹಾಣ, ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿ ಸೇರಿದಂತೆ ತಹಸೀಲ್ ಕಾರ್ಯಾಲಯದ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.