ಎಸ್ಪಿ ಕಚೇರಿಯಲ್ಲಿ ಸಿಸಿಟಿವಿ ನಿಯಂತ್ರಣ ಕೊಠಡಿ ಉದ್ಘಾಟನೆ ಮಾಡಿದ ಸಚಿವ ಈಶ್ವರ್ ಖಂಡ್ರೆ

ಬೀದರ್ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಕಚೇರಿಯಲ್ಲಿ ಸಿಸಿಟಿವಿ ನಿಯಂತ್ರಣ ಕೊಠಡಿಯನ್ನು ಇಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರು ಉದ್ಘಾಟನೆ ಮಾಡಿದರು.
ಸಿಸಿಟಿವಿ ನಿಯಂತ್ರಣ ಕೊಠಡಿ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಇದು ವಿನೂತವಾದ ಎ ಐ ಕ್ಯಾಮೆರಾ ಉಪಯೋಗಿಸಿ ಸಿದ್ದಪಡಿಸಲಾಗಿದೆ. ಜಿಲ್ಲಾದ್ಯಂತ ಅಪರಾಧ ನಿಯಂತ್ರಣ ಮಾಡುವುದಕ್ಕೆ ಇದು ಅತ್ಯಂತ ಉಪಯುಕ್ತವಾದದ್ದು ಎಂದು ಹೇಳಿದರು.
ನನಗೆ ಅತ್ಯಂತ ಖುಷಿಯಾಗುತ್ತಿದೆ. ಇಂತಹ ಒಂದು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅಪರಾಧ ನಿಯಂತ್ರಣ ಮಾಡಿ ಜನರಿಗೆ ಸುರಕ್ಷತೆ ನೀಡುವ, ಯಾವುದೇ ಕಾನೂನು ಬಾಹಿರ ಕೃತ್ಯಗಳು ಆಗದ ರೀತಿಯಲ್ಲಿ ನೋಡಿಕೊಳ್ಳುವುದಕ್ಕೆ ಇದು ಬಹಳಷ್ಟು ಉಪಯುಕ್ತವಾಗಿದೆ ಎಂದು ನಾನು ಅತೀ ಹೆಮ್ಮೆಯಿಂದ ಹೇಳಲು ಬಯಸುತ್ತೇನೆ ಎಂದು ತಿಳಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜತೆಗೂಡಿ ನಮ್ಮ ಸೂಚನೆ ಮೇರೆಗೆ ಇದನ್ನು ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 2 ಕೋಟಿ ರೂ. ಅನುದಾನ ಇದಕ್ಕೆ ಮೀಸಲಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಜಿಲ್ಲೆಗೆ ಕಾನೂನು ಸುವ್ಯವಸ್ಥೆ, ಸಂರಕ್ಷಣೆ, ಜನರಿಗೆ ಸಹಾಯ ಮಾಡುವುದಕ್ಕೆ ಉಪಯುಕ್ತವಾಗಿದೆ. ಅಪರಾಧ, ಕಳ್ಳತನ, ದರೋಡೆಯಂತಹ ಘಟನೆಗಳು ತಡೆಯುವುದಕ್ಕೆ ಇದು ಸಹಾಯಕವಾಗುತ್ತದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಸಾರ್ವಜನಿಕರು ಜಿಲ್ಲೆಯಲ್ಲಿ ಧೈರ್ಯವಾಗಿ ವ್ಯಾಪಾರ ಹಾಗೂ ಇನ್ನಿತರ ಕೆಲಸಗಳು ಮಾಡಬೇಕು. ಅವರಿಗೆ ಸಹಕಾರ ಮತ್ತು ಸುರಕ್ಷತೆ ಕೊಡುವುದು ನಮ್ಮ ಸರ್ಕಾರದ ಜವಾಬ್ದಾರಿಯಾಗಿದೆ. ಆ ಜವಾಬ್ದಾರಿ ನಿಷ್ಠೆ ಮತ್ತು ಪ್ರಮಾಣಿಕತೆಯಿಂದ ನಿಭಾಯಿಸುತ್ತೇವೆ ಎಂದು ಭರವಸೆ ನೀಡಿದರು.
ಇಲ್ಲಿ 36 ಕ್ಯಾಮೆರಾಗಳಿದ್ದಾವೆ. ಗಡಿಭಾಗದಲ್ಲಿರುವ ಜಿಲ್ಲೆ ಒಂದು ಕಡೆ ತೆಲಂಗಾಣ ಇನ್ನೊಂದು ಕಡೆ ಮಹಾರಾಷ್ಟ್ರ ರಾಜ್ಯ ಬರುತ್ತದೆ. ಹಾಗಾಗಿ ಬಹಳಷ್ಟು ಕಡೆ ಕಾಲುದಾರಿಗಳಿದ್ದಾವೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಕಡೆ ಕ್ಯಾಮೆರಾಗಳು ಅಳವಡಿಸಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದೇನೆ. ಈಗಾಗಲೇ ಇದರ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ಕೈಗೊಂಡು ತಜ್ಞರ ಜೊತೆ ಸಂಪರ್ಕ ಮಾಡಿ ಚರ್ಚೆ ಮಾಡುತ್ತಿದ್ದಾರೆ. ಅದರ ಬಗ್ಗೆ ಯೋಜನಾ ವರದಿಯೊಂದು ತಯಾರಿಸಿ ಚರ್ಚಿಸಲಾಗುವುದು. ಅಂತಿಮವಾಗಿ ಅದಕ್ಕೆ ಎಷ್ಟು ಅನುದಾನ ಎಷ್ಟು ಬೇಕಾಗಿದೆ ಎಂದು ಅವರು ನನ್ನ ಗಮನಕ್ಕೆ ತಂದ ಮೇಲೆ ನಾನು ಆ ಅನುದಾನವನ್ನು ಮಂಜೂರಾತಿ ಮಾಡಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಶೈಲೆಂದ್ರ ಬೆಲ್ದಾಳೆ, ನಗರ ಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪ್ರದೀಪ್ ಗುಂಟಿ ಹಾಗೂ ಎಲ್ಲ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.