ಬ್ರೀಮ್ಸ್ ಆಸ್ಪತ್ರೆಯಲ್ಲಿ ವಿಶೇಷ ಆಟಿಸಂ ಚಿಕಿತ್ಸಾ ವಿಭಾಗ ಸ್ಥಾಪಿಸಲು ಸಚಿವ ಈಶ್ವರ್ ಖಂಡ್ರೆ ಸೂಚನೆ

ಬೀದರ್ : ಜಿಲ್ಲೆಯಲ್ಲಿ ಆಟಿಸಂ ಪೀಡಿತ ಮಕ್ಕಳಿಗೆ ಉತ್ತಮ ಆರೋಗ್ಯ ಸೇವೆ ಹಾಗೂ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಬ್ರೀಮ್ಸ್ ಆಸ್ಪತ್ರೆಯಲ್ಲಿ ವಿಶೇಷ ಆಟಿಸಂ ಚಿಕಿತ್ಸಾ ವಿಭಾಗ ಸ್ಥಾಪಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ನಗರದ ಉಟಗೇ ಆಸ್ಪತ್ರೆಯಲ್ಲಿ ವಿಜಯದೇವಿ ಫೌಂಡೇಶನ್ ಅಡಿಯಲ್ಲಿ ನಡೆಯುತ್ತಿರುವ ಉಟಗೆ ನ್ಯೂರೊ, ಉಮಂಗ್ ವಿಶೇಷ ಶಾಲೆ ಹಾಗೂ ಐಎಪಿ ಫೌಂಡೇಶನ್ ಅವರ ಸಂಯುಕ್ತಾಶ್ರಯದಲ್ಲಿ ನಡೆದ ʼವಿಶ್ವ ಆಟಿಸಂ ದಿನಾಚರಣೆʼ ಉದ್ಘಾಟಿಸಿ ಅವರು ಮಾತನಾಡಿದರು.
ಆಟಿಸಂ ಪೀಡಿತ ಮಕ್ಕಳು ವಿಭಿನ್ನ ಪ್ರತಿಭೆಗಳು ಹೊಂದಿದ್ದು, ಅವರ ಸಾಮರ್ಥ್ಯವನ್ನು ಬೆಳೆಸುವ ಮೂಲಕ ಅವರನ್ನು ಸಮಾಜದಲ್ಲಿ ಮುಂಚೂಣಿಗೆ ತರುವುದಕ್ಕೆ ಎಲ್ಲರೂ ಬೆಂಬಲಿಸಬೇಕು. ಜಿಲ್ಲೆಯಲ್ಲಿ ಆಟಿಸಂ ಪೀಡಿತ ಮಕ್ಕಳಿಗೆ ಉತ್ತಮ ಚಿಕಿತ್ಸೆ ಮತ್ತು ಸೇವೆ ಒದಗಿಸುತ್ತಿರುವ ಡಾ ಪ್ರಶಾಂತ್ ಉಟಗೆಯವರ ಶ್ರಮ ಶ್ಲಾಘನೀಯವಾಗಿದೆ ಎಂದು ಅವರ ಸೇವೆಯನ್ನು ಪ್ರಶಂಸಿಸಿದರು.
ಡಾ.ಪ್ರಶಾಂತ್ ಉಟಗೆ ಅವರು ಮಾತನಾಡಿ, ಮಕ್ಕಳನ್ನು ಪಾಲಕರು ಶಾಪ ಎಂದು ತಿಳಿಯದೇ, ದೇವರ ಕೊಟ್ಟ ವರ ಎಂದು ತಿಳಿದುಕೊಳ್ಳಬೇಕು ಎಂದು ಪೋಷಕರಿಗೆ ತಿಳುವಳಿಕೆ ಹೇಳಿದ ಅವರು, ಮಕ್ಕಳಿಗೆ ಸಂಬಂಧಪಟ್ಟ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಸಚಿವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ಬದೋಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಜ್ಞಾನೇಶ್ವರ್ ನಿರಗುಡಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಎಚ್.ಎಸ್. ಸಿಂಧು, ಡಾ. ಗಿರಿಶ, ಡಾ. ರತಿಕಾಂತ್ ಸ್ವಾಮಿ, ಡಾ. ಸಿ. ಆನಂದರಾವ್, ಸುಭಾಷ್ ಪಾಟೀಲ್, ಐಎಪಿ ಫೌಂಡೇಶನ್ ಕಾರ್ಯದರ್ಶಿ ಡಾ.ಭಗವಾನ್ ಮಳದಾರ್, ಯುವಜನ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ನಾಗರಾಜ್ ಮಠ, ಸಿಬ್ಬಂದಿ ವರ್ಗದವರಾದ ಡಾ. ಹೇಮಾ, ಡಾ.ವೆಂಕಟರಮಣ, ಡಾ.ಗಣೇಶ್ ಡೊಂಗರೆ, ಡಾ.ನಾಜೀರ್, ಉಮಾಕಾಂತ್, ಶ್ರೀಕಾಂತ್ ಪಾಟೀಲ್, ಸಂಗಮೇಶ್, ಆಕಾಂಕ್ಷಾ ಹಾಗೂ ಶಿವಾನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.