ಕಾಲಮಿತಿಯಲ್ಲಿ ವಸತಿ ಯೋಜನೆ ಪೂರ್ಣಗೊಳಿಸಲು ಸಚಿವ ಝಮೀರ್ ಅಹ್ಮದ್ ಸೂಚನೆ
ಬೀದರ್ : ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಬಡ ಕುಟುಂಬಗಳಿಗೆ ನಿರ್ಮಿಸಿಕೊಡುತ್ತಿರುವ ಮನೆಗಳ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಸೂಚನೆ ನೀಡಿದ್ದಾರೆ.
ಮಂಗಳವಾರ ಬೀದರ್ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಸತಿ ಹಾಗೂ ವಕ್ಫ್ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, 1.82 ಲಕ್ಷ ಮನೆಗಳ ಪೈಕಿ ಎರಡನೇ ಕಂತಿನಲ್ಲಿ 42 ಸಾವಿರ ಮನೆಗಳ ಹಂಚಿಕೆಗೆ ಶೀಘ್ರ ದಿನಾಂಕ ನಿಗದಿ ಪಡಿಸಬೇಕಿದೆ. ಬೀದರ್ ನಲ್ಲಿ 2150 ಮನೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣ ಮಾಡಲಾಗುತ್ತಿರುವ ಒಟ್ಟು 3497 ಮನೆಗಳ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು ಮೂಲ ಸೌಕರ್ಯ ಸಹಿತ ಸುಸಜ್ಜಿತ ಮನೆಗಳ ನಿರ್ಮಾಣ ಮಾಡಬೇಕು ಎಂದು ತಿಳಿಸಿದ ಅವರು, ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಹಂಚಿಕೆಯಾದ ಮನೆಗಳ ಬಗ್ಗೆಯೂ ಇದೇ ಸಂದರ್ಭದಲ್ಲಿ ಮಾಹಿತಿ ಪಡೆದರು.
ಸೋಮವಾರ ನಡೆದ ವಕ್ಫ್ ಅದಾಲತ್ ನಲ್ಲಿ ಸಲ್ಲಿಕೆಯಾದ 197 ಅರ್ಜಿಗಳ ಪೈಕಿ 14 ಖಾತೆ, 11 ಒತ್ತುವರಿ, 34 ಖಬರಸ್ಥಾನ(ಸ್ಮಶಾನ) ಅರ್ಜಿಗಳನ್ನು ಒಂದು ತಿಂಗಳಲ್ಲಿ ಇತ್ಯರ್ಥ ಪಡಿಸಲು ಗಡುವು ನೀಡಿದ ಝಮೀರ್ ಅಹ್ಮದ್ ಖಾನ್, ವಕ್ಫ್ ಅದಾಲತ್ ನಲ್ಲಿ ಬಂದ ಅರ್ಜಿ ಹೊರತು ಪಡಿಸಿ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆಯೂ ಕ್ರಮ ತೆಗೆದುಕೊಳ್ಳಿ. ಕಾಲ ಮಿತಿಯಲ್ಲಿ ಇತ್ಯರ್ಥ ಮಾಡದಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಅನ್ವರ್ ಬಾಷಾ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸಪ್ಪ, ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕ ಮೊಕಾಶಿ ಜಿಲಾನಿ ಉಪಸ್ಥಿತರಿದ್ದರು.