ಪಾಲಿಟೆಕ್ನಿಕ್ ಕಾಲೇಜಿಗೆ ಉಪನ್ಯಾಸಕರನ್ನು ನೇಮಿಸಲು ಉನ್ನತ ಶಿಕ್ಷಣ ಸಚಿವರಿಗೆ ಶಾಸಕ ಪ್ರಭು ಚವ್ಹಾಣ್ ಮನವಿ

ಬೀದರ್ : ಔರಾದ್ (ಬಿ) ಪಟ್ಟಣದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತಿದ್ದು, ಕೂಡಲೇ ಉಪನ್ಯಾಸಕರನ್ನು ನೇಮಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಅವರು ಮನವಿ ಮಾಡಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಅವರು, ಔರಾದ್ (ಬಿ) ತಾಲ್ಲೂಕು ಡಾ.ನಂಜುಂಡಪ್ಪ ವರದಿಯ ಅನ್ವಯ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ತಾಲ್ಲೂಕು ಕೇಂದ್ರವಾದ ಔರಾದ್ (ಬಿ) ನಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ನಡೆಯುತ್ತಿದ್ದು, ಅಲ್ಲಿ ಉಪನ್ಯಾಸಕರ ಕೊರತೆಯಿದೆ. ಹಾಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತಿದೆ. ಒಟ್ಟು 27 ಅಧ್ಯಾಪಕರ ಪೈಕಿ ಒಬ್ಬರು ಮಾತ್ರ ಸೇವೆ ಸಲ್ಲಿಸುತ್ತಿದ್ದು, 26 ಹುದ್ದೆಗಳು ಖಾಲಿಯಿವೆ. ಇರುವ ಒಬ್ಬ ಪ್ರಾಧ್ಯಾಪಕರು ವರ್ಗಾವಣೆಯಾದರೆ ಪಾಲಿಟೆಕ್ನಿಕ್ ಕಾಲೇಜು ಅನಾಥವಾಗಲಿದೆ ಎಂದು ವಿವರಣೆ ನೀಡಿದ್ದಾರೆ.
ಉಪನ್ಯಾಸಕರ ಕೊರತೆಯ ಕಾರಣ ಕ್ಷೇತ್ರದ ಮಕ್ಕಳು ಕಾಲೇಜು ಇದ್ದರೂ ಕೂಡ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕಾಗಿ ದೂರದ ಬೀದರ್ ಹಾಗೂ ಮತ್ತಿತರ ಕಡೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದುಳಿದ ಪ್ರದೇಶವಾಗಿರುವ ಈ ಭಾಗದಲ್ಲಿ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ಕಲ್ಪಿಸಿ ಉದ್ಯೋಗಾವಕಾಶ ಪಡೆಯಲು ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಸಾಕಷ್ಟು ಪ್ರಯತ್ನಪಟ್ಟು ಈ ಕಾಲೇಜು ತಂದಿದ್ದೇನೆ. ಸುಸಜ್ಜಿತ ಕಟ್ಟಡ, ಮೂಲಭೂತ ಸೌಕರ್ಯ ಹಾಗೂ ಮಕ್ಕಳ ಸಂಖ್ಯೆಯೂ ಉತ್ತಮ ರೀತಿಯಲ್ಲಿದೆ. ಆದರೆ ಖಾಯಂ ಶಿಕ್ಷಕರಿಲ್ಲದೇ ಅತಿಥಿ ಶಿಕ್ಷಕರಿಂದ ಬೋಧನೆ ಮಾಡಿಸಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಕಾಲೇಜು ಮುಚ್ಚಬೇಕಾದ ಪರಿಸ್ಥಿತಿ ಬರುತ್ತದೆ. ಹಾಗಾಗಿ ಕೂಡಲೇ ಖಾಯಂ ಬೋಧಕರನ್ನು ಒದಗಿಸಬೇಕು ಎಂದು ಕೋರಿದ್ದಾರೆ.
ಸಿಪಿ ವಿಭಾಗಕ್ಕೆ ಹುದ್ದೆಗಳ ಮಂಜೂರಾತಿಗೆ ಮನವಿ :
ಕಳೆದೊಂದು ವರ್ಷದಿಂದ ಈ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಕಮರ್ಷಿಯಲ್ ಪ್ರಾಕ್ಟೀಕಲ್ ವಿಭಾಗವನ್ನು ತೆರೆಯಲಾಗಿದೆ. ಈ ವಿಭಾಗಕ್ಕೆ ಹೆಚ್ಚಿನ ಬೇಡಿಕೆಯಿದ್ದು, ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಹೊಸ ಹುದ್ದೆಗಳು ಮಂಜೂರು ಮಾಡಿ, ಖಾಯಂ ಸಿಬ್ಬಂದಿ ಒದಗಿಸಿದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನಮ್ಮ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಾಜ್ಯದೆಲ್ಲೆಡೆ ಬೋಧಕ ಸಿಬ್ಬಂದಿಯ ಕೊರತೆಯಿದೆ. ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತದೆ. ಹಾಗೆಯೇ ಕಮರ್ಷಿಯಲ್ ಪ್ರಾಕ್ಟೀಸ್ ವಿಭಾಗಕ್ಕೆ ಹುದ್ದೆಗಳ ಮಂಜೂರಾತಿಗೂ ಅಗತ್ಯ ಕ್ರಮ ವಹಿಸುವುದೆಂದು ತಿಳಿಸಿದ್ದಾರೆ ಎಂದು ಶಾಸಕ ಪ್ರಭು ಚೌವ್ಹಾಣ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.