ಬೀದರ್: ಅಕ್ರಮ ಮರಳು ಗಣಿಗಾರಿಕೆಗೆ ಬಳಸುತ್ತಿದ್ದ ಬೋಟ್‌ಗೆ ಬೆಂಕಿ ಹಚ್ಚಿದ ಅಧಿಕಾರಿಗಳು

ಬೀದರ್: ಅಕ್ರಮ ಮರಳು ಗಣಿಗಾರಿಕೆಗೆ ಬಳಸುತ್ತಿದ್ದ ಬೋಟ್ ಗೆ ಬೆಂಕಿ ಹಚ್ಚಿ ನಾಶಪಡಿಸಿದ ಘಟನೆ ಭಾಲ್ಕಿ ತಾಲ್ಲೂಕಿನ ಹಲಸಿ ತೂಗಾಂವ್ ಗ್ರಾಮದ ಮಾಂಜ್ರಾ ನದಿಯ ದಡದಲ್ಲಿ ನಡೆದಿದೆ.
ಇಂದು ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿರುವ ಮಾಹಿತಿ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿ ದಾಳಿ ನಡೆಸಿ ಗಣಿಗಾರಿಕೆಗೆ ಬಳಸುತ್ತಿರುವ ಸ್ವಯಂಚಾಲಿತ ಮರಳು ಸಾಗಾಟ ಯಂತ್ರಕ್ಕೆ ಬೆಂಕಿ ಹಚ್ಚಿದ್ದಾರೆ.
ಯಾವುದೇ ಪರವಾನಗಿ ಇಲ್ಲದೇ ಮಾಂಜ್ರಾ ನದಿಯ ಮರಳು ಹಲವು ವರ್ಷಗಳಿಂದ ಮಹಾರಾಷ್ಟ್ರ, ಕರ್ನಾಟಕ ಗಡಿಯಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು. ಇದರಿಂದಾಗಿ ನದಿಯ ದಡ ಕೊರೆಯುತ್ತಿತ್ತು. ಇದರಿಂದಾಗಿ ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ, ಭಾಲ್ಕಿಯ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿ, ಮೇಹಕರ ಪೋಲಿಸ್ ಠಾಣೆಯ ಅಧಿಕಾರಿ ಹಾಗೂ ನಾಡ್ ತಹಶೀಲ್ದಾರ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಸುಮಾರು 7 ಲಕ್ಷ ರೂ. ಬೆಲೆ ಬಾಳುವ ಮರಳಿನ ಬೋಟ್ ಗೆ ಬೆಂಕಿ ಹಚ್ಚಲಾಗಿದೆ ಎನ್ನಲಾಗಿದೆ.