ಔರಾದ್ (ಬಿ) ಪಟ್ಟಣದ ಸ್ವಚ್ಚತೆಗೆ ಆದ್ಯತೆ ನೀಡಿ : ಶಾಸಕ ಪ್ರಭು ಚವ್ಹಾಣ

ಬೀದರ್ : ಔರಾದ್ (ಬಿ) ಪಟ್ಟಣದ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಬೇಕು ಎಂದು ಶಾಸಕ ಪ್ರಭು ಚವ್ಹಾಣ ಅವರು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಸ್ವಚ್ಛತಾ ಕೆಲಸಕ್ಕಾಗಿ ಹೊಸದಾಗಿ ತರಲಾದ ಟ್ರ್ಯಾಕ್ಟರ್ ಗೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣದ ಸ್ವಚ್ಛತೆಯ ನಿರ್ವಹಣೆಗೆ ಇರುವ ಎಲ್ಲ ವಾಹನಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಕಸದ ವಾಹನಗಳು ಪ್ರತಿ ಬೀದಿಯಲ್ಲಿ ಸಂಚರಿಸಿ ಕಸ ಸಂಗ್ರಹಿಸಬೇಕು. ಪಟ್ಟಣದಲ್ಲಿ ಎಲ್ಲಿಯೂ ಕಸದ ಗುಂಡಿಗಳು ಕಾಣಬಾರದು. ನಗರದ ಎಲ್ಲ 20 ವಾರ್ಡ್ ಗಳಲ್ಲಿ ಸ್ವಚ್ಛತಾ ಕರ್ಮಿಗಳನ್ನು ನಿಯೋಜಿಸಿ ರಸ್ತೆ ಮತ್ತು ಚರಂಡಿಗಳನ್ನು ಶುಚಿಗೊಳಿಸುವ ಕೆಲಸ ಮಾಡಬೇಕು ಎಂದರು.
ಔರಾದ್ ಪಟ್ಟಣ ಸುಂದರವಾಗಿ ಕಾಣಬೇಕು. ಹಾಗೆಯೇ ಸಾರ್ವಜನಿಕರಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಪಟ್ಟಣದ ಪ್ರಮುಖ ಬೀದಿಯಲ್ಲಿ ಸುಂದರವಾದ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ ಕೆಲವು ಕೆಟ್ಟುಹೋಗಿದ್ದು, ಅವುಗಳನ್ನು ತಕ್ಷಣವೇ ಸರಿಪಡಿಸುವ ಕೆಲಸವಾಗಬೇಕು. ಅದೇ ರೀತಿ ಪಟ್ಟಣದಲ್ಲಿರುವ ಎಲ್ಲ ಹೈಮಾಸ್ಟ್ ದೀಪಗಳು ಮತ್ತು ಬೀದಿ ದೀಪಗಳು ಚಾಲ್ತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸರುಬಾಯಿ ಘೂಳೆ, ಸದಸ್ಯರಾದ ಧೊಂಡಿಬಾ ನರೋಟೆ, ಸಂತೋಷ್ ಪೋಕಲವಾರ್, ದಯಾನಂದ್ ಘೂಳೆ, ಸಂಜು ವಡೆಯರ್, ಕೇರಬಾ ಪವಾರ್, ಗುಂಡಪ್ಪ ಮುಧಾಳೆ, ಯಾದು ಮೇತ್ರೆ, ಬನ್ಸಿಲಾಲ್ ಖೀರನಾಯಕ್ ಹಾಗೂ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸ್ವಾಮಿದಾಸ್ ಸೇರಿದಂತೆ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.