ಸಿಂಧನಕೇರಾ ಗ್ರಾಮ ಪಂಚಾಯತ್ ಪಿಡಿಓ ಕಿರುಕುಳ ಆರೋಪ; ಸಿಬ್ಬಂದಿ ಮೃತ್ಯು : ಪ್ರಕರಣ ದಾಖಲು

ಸುಭಾಷ್
ಬೀದರ್ : ಹುಮನಾಬಾದ್ ತಾಲ್ಲೂಕಿನ ಸಿಂಧನಕೇರಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಗಂಧಾ ರಾಧೂ ಅವರು ನೀಡಿದ ಕಿರಕುಳದಿಂದ ಪಂಚಾಯತ್ ನ ಕಂಪ್ಯೂಟರ್ ಆಪರೇಟರ್ ಸಿಬ್ಬಂದಿ ಮೃತಪಟ್ಟ ಆರೋಪದ ಮೇರೆಗೆ ಪಿಡಿಓ ವಿರುದ್ಧ ಪ್ರಕರಣ ದಾಖಲಾಗಿದೆ.
ಸುಭಾಷ್ (55) ಮೃತಪಟ್ಟ ಗ್ರಾಮ ಪಂಚಾಯತ್ ಸಿಬ್ಬಂದಿ ಎಂದು ಗುರುತಿಸಲಾಗಿದೆ.
ಸುಭಾಷ್ ಅವರು ಹುಮನಾಬಾದ್ ತಾಲ್ಲೂಕಿನ ಸಿಂಧನಕೇರಾ ಗ್ರಾಮ ಪಂಚಾಯತ್ನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರನ್ನು ಪಿಡಿಒ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಿಂದ ರಕ್ತದೋತ್ತಡ ಸಂಭವಿಸಿ ಮಂಗಳವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ನನ್ನ ಪತಿ 15 ವರ್ಷದಿಂದ ಸಿಂಧನಕೇರಾ ಪಂಚಾಯತ್ನಲ್ಲಿ ಕ್ಲರ್ಕ್ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತಿದ್ದು, ಎರಡು ವರ್ಷದಿಂದ ವೇತನ ನೀಡದೆ ಸತಾಯಿಸಿದ್ದಾರೆ. ವೇತನ ಕೇಳಿದ್ದಕ್ಕೆ ಪಿಡಿಒ ಅವರು ನನ್ನ ಗಂಡನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಅವರಿಗೆ ಹೆಚ್ಚಿನ ಕೆಲಸ ನೀಡಿ ಕಿರಕುಳ ನೀಡಿದ್ದಾರೆ. ಈ ಹಿಂದೆ ನನ್ನ ಗಂಡನಿಗೆ ಸಾರ್ವಜನಿಕರ ಎದುರಲ್ಲೇ ಹೊಡೆದಿದ್ದರು. ಮಂಗಳವಾರವು ಕೂಡ ನನ್ನ ಗಂಡ ಎಂದಿನಂತೆ ಕೆಲಸಕ್ಕೆ ಹೋದಾಗ ಅವರಿಗೆ ಪಿಡಿಒ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದಾಗಿ ನನ್ನ ಗಂಡನಿಗೆ ರಕ್ತದೊತ್ತಡ ಸಂಭವಿಸಿ ಮೃತಪಟ್ಟಿದ್ದಾರೆ. ನನ್ನ ಪತಿಯ ಸಾವಿಗೆ ಪಿಡಿಓ ಅವರೇ ನೇರ ಕಾರಣ ಎಂದು ಮೃತ ವ್ಯಕ್ತಿಯ ಪತ್ನಿ ಜನಾಬಾಯಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸಿಂಧನಕೇರಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಗಂಧಾ ರಾಧೂ ಅವರ ವಿರುದ್ಧ ಚಿಟಗುಪ್ಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.