ಬೀದರ್ | ಆನ್ಲೈನ್ ಗೇಮಿಂಗ್ : 10 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಯುವಕ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆ
ವಿಜಯಕುಮಾರ್ ಹೊಳ್ಳೆ (25)
ಬೀದರ್ : ಆನ್ಲೈನ್ ಗೇಮಿಂಗ್ ವ್ಯಾಮೋಹಕ್ಕೆ ಸಿಲುಕಿ 10 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡು ಮನನೊಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಬೇಲೂರು ಗ್ರಾಮದಲ್ಲಿ ನಡೆದಿದೆ.
ಹುಲಸೂರ ತಾಲೂಕಿನ ಬೇಲೂರ ಗ್ರಾಮದ ವಿಜಯಕುಮಾರ್ ಹೊಳ್ಳೆ (25) ಮೃತ ಯುವಕ.
ಡಿ.ಫಾರ್ಮ್ ಪದವೀಧರನಾಗಿದ್ದ ಯುವಕ, ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಕೆಲ ತಿಂಗಳಿಂದ ಆನ್ಲೈನ್ ಗೇಮಿಂಗ್ ವ್ಯಾಮೋಹಕ್ಕೆ ಸಿಲುಕಿ 10 ಲಕ್ಷಕ್ಕೂ ಅಧಿಕ ಹಣ ಸಾಲ ಕಳೆದುಕೊಂಡಿದ್ದ ಎನ್ನಲಾಗಿದೆ. ಕಳೆದುಕೊಂಡ ಹಣ ಕುಟುಂಬಸ್ಥರು ಭರಿಸಿ ಮತ್ತೆ ಆನ್ ಲೈನ್ ಗೇಮ್ ಆಡದಂತೆ ಬುದ್ದಿಮಾತು ಹೇಳಿದ್ದರು. ಆದರೂ ಕೂಡ ಯುವಕ ಮತ್ತೆ ಸಾಲ ಮಾಡಿಕೊಂಡು ಆನ್ ಲೈನ್ ಗೇಮ್ ಆಡುವ ಮೂಲಕ ಹಣ ಕಳೆದುಕೊಂಡಿದ್ದ ಎನ್ನಲಾಗಿದೆ.
ಸಾಲ ಮಾಡಿದ ವಿಷಯ ಮನೆಯಲ್ಲಿ ಗೊತ್ತಾಗುತ್ತದೆ ಎನ್ನುವ ಕಾರಣಕ್ಕೆ ವಿಜಯಕುಮಾರ್ ಗುರುವಾರದಂದು ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ.