ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಿ : ಸಚಿವ ಈಶ್ವರ್ ಖಂಡ್ರೆ

ಬೀದರ್ : ಜಿಲ್ಲೆಯ 867 ಜನವಸತಿ ಪ್ರದೇಶಗಳಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಮುಂಜಾಗೃತಾ ಕ್ರಮ ವಹಿಸಬೇಕು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೀರಿನ ಎಲ್ಲ ಕಾಮಗಾರಿಗಳು ಕಾಲಮಿತಿಯಲ್ಲಿ ಪೂರ್ಣಗೊಳಿಸಿ, ಸದ್ಯ ಬೇಸಿಗೆಯಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಈಗಾಗಲೇ 632 ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಶಾಶ್ವತ ನೀರಿನ ವಲಯ ಬಳಸಿ ನೀರು ಸರಬರಾಜು ಯೋಜನೆ ಕೈಗೊಳ್ಳುವಂತೆ ಸೂಚಿಸಿದರು.
ಇವರೆಗೆ ಜಿಲ್ಲೆಯಲ್ಲಿ ಮರಣ ಹೊಂದಿರುವ ಬಾಣಂತಿಯರ ಬಗ್ಗೆ ಮಾಹಿತಿ ಪಡೆದ ಅವರು, ಜಿಲ್ಲೆಯಲ್ಲಿ ಗರ್ಭಿಣಿ ಹಾಗೂ ಹೆರಿಗೆ ಪ್ರಕರಣಗಳಲ್ಲಿ ಸೂಕ್ತ ಔಷಧೋಪಚಾರ ಹಾಗೂ ಚಿಕಿತ್ಸೆ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರುಗಡೆ ಅವರಿಗೆ ಸೂಚಿಸಿದರು. ಹಾಗೆಯೇ ಜಿಲ್ಲೆಯಲ್ಲಿ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ವೈದ್ಯಾಧಿಕಾರಿಗಳು ಪ್ರಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದರು.
ಬ್ರಿಮ್ಸ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಸರಿಪಡಿಸಲು ಡಿಎಚ್ಓ, ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ಬ್ರಿಮ್ಸ್ ನಿರ್ದೇಶಕರು ಚರ್ಚಿಸಿ ಸಹಕಾರದಿಂದ ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಕ್ರಮ ವಹಿಸಬೇಕು. ಮಾರ್ಚ್ ತಿಂಗಳ ಒಳಗಾಗಿ ಕ್ಯಾಟ್‍ಲ್ಯಾಬ್ ಆರಂಭಿಸಬೇಕು. ಡಯಾಲಿಸಿಸ್ ರೋಗಿಗಳು ಚಿಕಿತ್ಸೆಗಾಗಿ ಕಾಯುವ ಸ್ಥಿತಿ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಇನ್ನೆರಡು ಡಯಾಲಿಸಿಸ್ ಯಂತ್ರ ಬೇಕಿದ್ದಲ್ಲಿ ಕೆಕೆಆರ್ಡಿಬಿ ಅನುದಾನದಡಿ ಯಂತ್ರ ನೀಡಲಾಗುವುದು. ಆದರೆ ಡಯಾಲಿಸಿಸ್ ರೋಗಿಗಳಿಗೆ ಸಮಸ್ಯೆಯಾಗದಂತೆ ವೈದ್ಯರು 3 ಶಿಫ್ಟ್‌ಗಳಲ್ಲಿ ಚಿಕಿತ್ಸೆ ನೀಡುವಂತಗಬೇಕು. 10 ದಿನದೊಳಗೆ ಕ್ರಮ ವಹಿಸದಿದ್ದರೆ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕ್ಯಾನ್ಸರ್ ಪೀಡಿತ ರೋಗಿಗಳು ಜಿಲ್ಲೆಯ ಹೊರಗೆ ಕಿಮೋಥೆರೆಪಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಬ್ರಿಮ್ಸ್ ಆಸ್ಪತ್ರೆಯಲ್ಲಿ ಈಗಾಗಲೇ ಡೇ ಕೇರ್ ಕಿಮೋ ಕೇಂದ್ರ ಆರಂಭಗೊಂಡಿರುವ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕು ಎಂದು ತಿಳಿಸಿದಾಗ, ಬ್ರಿಮ್ಸ್ ನ ವಾರ್ಡನಲ್ಲಿ ಈವರೆಗೆ 96 ಜನ ಕೀಮೋಥೆರೆಪಿ ಪಡೆಯುತ್ತಿರುವ ಬಗ್ಗೆ ವೈದ್ಯಾಧಿಕಾರಿಗಳು ಸಚಿವರ ಗಮನಕ್ಕೆ ತಂದರು.
ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಈ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಪೊಲೀಸ್ ಇಲಾಖೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದಾಗ, ಆರ್ ಟಿ ಓ ಅವರು ಜಿಲ್ಲೆಯಲ್ಲಿ ವರ್ಷಕ್ಕೆ 300 ಅಪಘಾತಗಳು ಆಗುತ್ತಿವೆ ಎಂದು ಮಾಹಿತಿ ನೀಡಿದರು. ಜಿಲ್ಲೆಯ ಎಲ್ಲ ವಾಹನಗಳಿಗೆ ರೇಡಿಯಂ ಸೈಕಲ್ ಕಡ್ಡಾಯವಾಗಿ ಅಂಟಿಸಬೇಕು. ಎಲ್ಲ ಪ್ರಮುಖ ರಸ್ತೆ, ವೃತ್ತಗಳಲ್ಲಿ ಉತ್ತಮ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ನೌಬಾದ್, ನಿಲಂಗಾ ಹಾಗೂ ಬೀದರ್ ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವೆಡೆ ತಗ್ಗು ಹಾಗೂ ಉಬ್ಬು ಕಂಡು ಬಂದಿದ್ದು ಅಪಘಾತ ಸಂಭವಿಸಬಹುದಾಗಿದೆ. ಹಾಗಾಗಿ ತಕ್ಷಣವೇ ಅದನ್ನು ಸರಿಪಡಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಇಂಜಿನೀಯರ್ ಅವರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಗೊಳಪಡುವ ವಸತಿ ನಿಲಯ, ವಸತಿ ಶಾಲೆಗಳ ಕಟ್ಟಡ ಅಥವಾ ನಿವೇಶನ ಕೊರತೆ ಇರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ವರದಿ ನೀಡಬೇಕು. ಹಿಂದುಳಿದ, ಅಲ್ಪಸಂಖ್ಯಾತ, ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ ಅಭಿವೃದ್ಧಿ ಹಾಗೂ ಇತರೇ ಇಲಾಖೆಗಳು ಮುಂಬರುವ ಸಾಲಿನಲ್ಲಿ ಯಾವುದೇ ವಿದ್ಯಾರ್ಥಿಗೆ ಶಿಕ್ಷಣಕ್ಕೆ ಅನಾನುಕೂಲವಾಗದಂತೆ ವಸತಿ ನಿಲಯಕ್ಕೆ ಪ್ರವೇಶ ನೀಡಬೇಕು. ಈ ನಿಟ್ಟಿನಲ್ಲಿ ಜಿಲ್ಲೆಗೆ ಅಗತ್ಯವಿರುವ ವಸತಿ ನಿಲಯದ ನಿವೇಶನ ಹಾಗೂ ಕಟ್ಟಡಗಳ ವಿವರ ನೀಡಿದಲ್ಲಿ ಮುಂಬರುವ ಕ್ಯಾಬಿನೆಟ್‍ನಲ್ಲಿ ಚರ್ಚಿಸಲಾಗುವುದು. ವಸತಿ ನಿಲಯದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರ ಕುರಿತು ದೂರುಗಳು ಕೇಳಿ ಬಂದಿದೆ. ಹಾಗಾಗಿ ಅಧಿಕಾರಿಗಳು ಹಾಗೂ ವಾರ್ಡನ ತಕ್ಷಣವೇ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಬಾಕಿಯಿರುವ ಎಲ್ಲ ಅಂಗನವಾಡಿ ಕಟ್ಟಡಗಳು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಜಿಲ್ಲೆಯ ಎಸೆಸೆಲ್ಸಿ ಫಲಿತಾಂಶ ಹಾಗೂ ಸ್ಥಾನವನ್ನು ಹೆಚ್ಚಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಹೆಚ್ಚಿನ ಕ್ರಮ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್ ಎಂ ರೇವಣ್ಣ, ಯುವಜನ ಸೇವೆ ಇಲಾಖೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿ.ರಂದೀಪ್, ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ಧಲಿಂಗ ಪಾಟೀಲ್, ಶರಣು ಸಲಗರ, ವಿಧಾನ ಪರಿಷತ್ ಸದಸ್ಯರಾದ ಭೀಮರಾವ್ ಪಾಟೀಲ್, ಡಾ.ಚಂದ್ರಶೇಖರ್ ಪಾಟೀಲ್, ನಗರಸಭೆ ಅಧ್ಯಕ್ಷ ಎಂ.ಡಿ.ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ ಎಂ ವಾನತಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.