ಇಂದಿನ ರಾಜಕಾರಣಿಗಳು ತಮ್ಮ ಅಧಿಕಾರಕ್ಕೋಸ್ಕರ ಇಡೀ ದೇಶವನ್ನೇ ನಾಶ ಮಾಡಲು ಹೇಸುವುದಿಲ್ಲ : ತುಷಾರ್ ಗಾಂಧಿ
ಬೀದರ್ : ಇಂದಿನ ರಾಜಕಾರಣಿಗಳು ತಮ್ಮ ಅಧಿಕಾರಕ್ಕೋಸ್ಕರ ಇಡೀ ದೇಶವನ್ನೇ ನಾಶ ಮಾಡಲು ಹೇಸುವುದಿಲ್ಲ ಎಂದು ಮಹಾತ್ಮಾ ಗಾಂಧೀಯ ಮರಿ ಮೊಮ್ಮಗ ತುಷಾರ್ ಗಾಂಧಿ ಹೇಳಿದರು.
ಇಂದು ನಗರದ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ವತಿಯಿಂದ 63 ದಿವಸದ ಅಕ್ಷರ ಜ್ಯೋತಿ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಯುವಜನರು ಇಂದಿನ ರಾಜಕಾರಣಿಗಳ ಉದಾಹರಣೆ ತೆಗೆದುಕೊಂಡು, ಅವರನ್ನು ಆದರ್ಶರನ್ನಾಗಿ ಮಾಡಿಕೊಂಡು ಬೆಳೆದರೆ ಯಾವುದೇ ಉಪಯೋಗವಿಲ್ಲ. ಒಂದು ವೇಳೆ ರಾಜಕೀಯ ಮಾಡುವುದೇ ಇದ್ದರೆ ಸೇವೆಯ ರಾಜಕೀಯ ಮಾಡಿ ಎಂದು ಯುವಕರಿಗೆ ತಿಳಿಸಿದರು.
ಇಂದಿನ ರಾಜಕಾರಣಿಗಳು ತಮ್ಮ ಅಧಿಕಾರಕ್ಕೋಸ್ಕರ ಇಡೀ ದೇಶವನ್ನೇ ನಾಶ ಮಾಡಲು ಹೇಸುವುದಿಲ್ಲ. ಈ ರೀತಿಯ ರಾಜಕೀಯ ನಮಗೆ ಬೇಕಿಲ್ಲ. 50 ವರ್ಷಕ್ಕಿಂತ ಮೊದಲು ಈ ದೇಶ ಬಾಲ್ಯವಸ್ಥೆಯಲ್ಲಿತ್ತು. ಆವಾಗ ಎಂಥ ರಾಜಕಾರಣಿಗಳು ಇದ್ದರೆ ಎಂದರೆ, ಈ ದೇಶ ಕಟ್ಟುವ ಸಲುವಾಗಿ ಯಾವತ್ತು ತನ್ನ ಮತ್ತು ತನ್ನ ಪಾರಿವಾರದವರ ಕಡೆಗೆ ನೋಡಲಿಲ್ಲ. ರಾಷ್ಟ್ರ ಕಟ್ಟಲು ಅವರು ಸಂಪೂರ್ಣವಾಗಿ ತಮ್ಮ ಜೀವನವನ್ನೇ ಸಮರ್ಪಣೆ ಮಾಡಿದ್ದರು ಎಂದರು.
ಇವಾಗ ಪ್ರಧಾನಿಯಿಂದ ಜನ ಸಾಮಾನ್ಯರವರೆಗೆ ಎಲ್ಲರೂ ಒಬ್ಬರು ಇನ್ನೊಬ್ಬರ ಜೊತೆ ದ್ವೇಷ ಹರಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಸಮಾಜದಲ್ಲಿ ಒಡಕು ಮೂಡುತ್ತಿದೆ. ಹಾಗಾಗಿ ನಾವು ಸಹೋದರತೆಯ, ಪ್ರೀತಿಯ ಮಾತುಗಳನ್ನಾಡುವುದು ತುಂಬಾ ಅವಶ್ಯಕವಾಗಿದೆ. ಧರ್ಮ, ಜಾತಿ, ಲಿಂಗ, ಭಾಷೆ, ಆರ್ಥಿಕ ಸ್ಥಾನಮಾನತೆ ಹೀಗೆ ಎಲ್ಲದರಲ್ಲಿಯೂ ನಾವು ಅಸಮಾನತೆಯನ್ನು ಹೊಂದಿದ್ದೇವೆ. ಸಮಾಜದಲ್ಲಿ ನಾವು ಪ್ರೀತಿಯ ಸಂದೇಶ ಸಾರುವ ಮೂಲಕ ಅದನ್ನು ದ್ವೇಷವನ್ನು ಅಳಿಸಬಹುದು ಎಂದು ನುಡಿದರು.
ಅಕ್ಕ ಐಎಎಸ್ ಅಕಾಡೆಮಿ ಮುಖ್ಯಸ್ಥ ಡಾ. ಶಿವಕುಮಾರ್ ಮಾತನಾಡಿ, ಓದಕ್ಕೆ ಬರದವರು ದಡ್ಡರಲ್ಲ. ಅವರಲ್ಲಿ ಯಾವುದಾದರೂ ಪ್ರತಿಭೆ ಇದ್ದೆ ಇರುತ್ತದೆ. ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ದೊಡ್ಡ ಮಟ್ಟದಲ್ಲಿ ಬೆಳೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಪದ್ಮ ಶ್ರೀ ಪುರಸ್ಕೃತರಾದ ಹರೇಕಳ್ ಹಾಜಬ್ಬ, ಸುಧಾ ವರ್ಗಿಸ್, ಮಹಾಲಿಂಗ್ ನಾಯ್ಕ, ರಾಣಿ ಮಾಚಯ್ಯ, ಸತ್ಯನಾರಾಯಣ ಬೇಲೆರಿ, ಶಾ ರಶೀದ್ ಅಹಮ್ಮದ್ ಖಾದ್ರಿ, ಸೋಮಣ್ಣ ಹಾಗೂ ಹುಚ್ಚಮ್ಮ ಬಸಪ್ಪ ಚೌದ್ರಿ ಅವರನ್ನು ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಗುರುಬಸವ ಪಟ್ಟದೇವರು , ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ್ ಪಾಟೀಲ್, ಶಾಹಿನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದಿರ್, ಜಗನ್ನಾಥ್ ಹಲ್ಮಡಗಿ, ರಾಜೇಂದ್ರಕುಮಾರ್ ಮಣಗೆರೆ ಹಾಗೂ ಹಾವಾಶೆಟ್ಟಿ ಪಾಟೀಲ್ ಸೇರಿದಂತೆ ಅನೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿದ್ದರು.