ಕರ್ನಾಟಕ ಬಂದ್ ಗೆ ಬೆಂಬಲಿಸಿ ವಿವಿಧ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ

ಬೀದರ್ : ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಇಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿತ್ತು. ಈ ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿ ಇಂದು ಜಿಲ್ಲೆಯಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಅವರು, ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯವರ ಗುಂಡಾವರ್ತನೆ ಮತ್ತು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿ ಬಸ್‌ಗಳಿಗೆ ಕಪ್ಪು ಮಸಿ ಬಳಿಯುತ್ತಿರುವುದನ್ನು ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸಕ್ರಿಯವಾಗಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ರದ್ದು ಮಾಡಿ, ಎಂಇಎಸ್ ಪುಂಡರನ್ನು ಕರ್ನಾಟಕದಿಂದ ಕೂಡಲೇ ಗಡಿಪಾರು ಮಾಡಬೇಕು. ಕರ್ನಾಟಕ ಸರ್ಕಾರದ ತಂಟೆಗೆ ಬಂದರೆ ಏನಾಗುತ್ತೆ ಎಂದು ಈ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಎಂಇಎಸ್ ಪುಂಡಾಟಿಕೆ ಹಾಗೂ ಶಿವಸೇನೆ ಪುಂಡಾಟಿಕೆಯನ್ನು ಖಂಡಿಸುತ್ತೇವೆ. ಈ ಕೂಡಲೇ ಕರ್ನಾಟಕದಲ್ಲಿ ಎಂಇಎಸ್ ಹಾಗೂ ಶಿವಸೇನೆ ಸಂಘಟನೆ ನಿಷೇಧ ಮಾಡಬೇಕು. ಕರ್ನಾಟಕದ ಕಂಡಕ್ಟರ್ ಹಾಗೂ ಡ್ರೈವರ್ ಮೇಲೆ ಹಲ್ಲೆ ಮಾಡಿದ ಸಂಘಟನೆಗಳು ಕರ್ನಾಟಕದಲ್ಲಿ ಇರಬಾರದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪ್ರಶಾಂತ್ ಭಾವಿಕಟ್ಟಿ, ಕನ್ನಡ ಸೇನೆ ಕರ್ನಾಟಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ರವಿ ಸ್ವಾಮಿ ನಿರ್ಣಾ, ಜಿಲ್ಲಾಧ್ಯಕ್ಷ ಸುಭಾಷ್ ಕೆನಡೆ, ಕನ್ನಡ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಸಂತೋಷ್ ಸೇರಿಕಾರ್, ಶಿವರಾಜ್ ಗುಮ್ಮೆ, ಸೋಮನಾಥ್ ಸ್ವಾಮಿ, ಅಮೃತ್ ಸೀಕೆನಪುರೆ, ಮಹಮ್ಮದ್ ಮುಜೀಬ್ ಹಾಗೂ ಅಮರ್ ಒಂಟೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.