ಯುವಜನರು ವಿವೇಕಾನಂದರ ಜೀವನ ಅನುಸರಿಸಬೇಕು : ಸಚಿವ ಈಶ್ವರ್ ಖಂಡ್ರೆ
ಬೀದರ್ : ಸ್ವಾಮಿ ವಿವೇಕಾನಂದರ ಚಿಂತನೆ, ವಿಚಾರಧಾರೆ ವಿಶ್ವಕ್ಕೆ ಮಾದರಿಯಾಗಿವೆ. ಯುವಜನರು ವಿವೇಕಾನಂದರ ಜೀವನ ಅನುಸರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಇಂದು ಭಾಲ್ಕಿ ತಾಲ್ಲೂಕಿನ ಕರಡ್ಯಾಳ ಚನ್ನಬಸವೇಶ್ವರ್ ಗುರುಕುಲದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಭಾರತದ ಶ್ರೇಷ್ಠ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದರು. ಚಿಕಾಗೋದಲ್ಲಿ ಅವರು ಮಾಡಿದ ಭಾಷಣ ಇಂದಿಗೂ ಜನಮಾನಸದಲ್ಲಿ ಉಳಿದಿದೆ ಎಂದರು.
ದೇಶದ ಬಹುದೊಡ್ಡ ಸಂಪನ್ಮೂಲ ಆಗಿರುವ ಯುವಶಕ್ತಿ ಯಾವುದೇ ದುಶ್ಚಟ, ದುರ್ಗುಣಗಳಿಗೆ ಬಲಿಯಾಗಬಾರದು. ವಿದ್ಯಾರ್ಥಿಗಳು ಮೊಬೈಲ್, ಫೇಸ್ಬುಕ್, ವಾಟ್ಸಾಪ್ ಗೀಳಿಗೆ ಹೆಚ್ಚಾಗಿ ಬಲಿಯಾಗಬಾರದು. ಮೊಬೈಲ್ನ ಲ್ಲಿ ಒಳ್ಳೆಯದ್ದು, ಕೆಟ್ಟದ್ದು ಎರಡು ಇವೆ. ಹಾಗಾಗಿ ಅದರಲ್ಲಿನ ಒಳ್ಳೆಯದ್ದನ್ನು ಮಾತ್ರ ಪಡೆದುಕೊಳ್ಳುವ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಅರ್ಥೈಸಿಕೊಂಡು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಉಪದೇಶ ನೀಡಿದರು.
ಸಾನ್ನಿಧ್ಯ ವಹಿಸಿದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಸ್ವಾಮಿ ವಿವೇಕಾನಂದ ಅವರು ಜ್ಞಾನದ ಕಣಜವಾಗಿದ್ದರು. ಅವರು ತಮ್ಮ ಜ್ಞಾನದ ಶಕ್ತಿ ಮೂಲಕ ದೇಶದ ಗೌರವ ಹಿರಿಮೆಯನ್ನು ಹೆಚ್ಚಿಸುವ ಪ್ರಯತ್ನ ಮಾಡಿದ್ದರು. ಅವರ ತತ್ವ, ಸಂದೇಶಗಳು ಪ್ರತಿಯೊಬ್ಬರಿಗೂ ಪ್ರೇರಣಾದಾಯಕವಾಗಿವೆ. ವಿದ್ಯಾರ್ಥಿಗಳು, ಯುವಕರು ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಜೀವನವನ್ನಾಗಿ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಗುತ್ತಿಗೆದಾರ ಸಂಗಮೇಶ್ ಹುಣಜೆ, ರಾಜಕುಮಾರ್ ಬಿರಾದಾರ್, ಆಡಳಿತಾಧಿಕಾರಿ ಮೋಹನ ರೆಡ್ಡಿ, ಪ್ರಾಚಾರ್ಯ ಬಸವರಾಜ್ ಮೊಳಕೆರೆ, ಉಪಪ್ರಾಚಾರ್ಯ ಸಿದ್ರಾಮ್ ಗೊಗ್ಗಾ, ಮಹೇಶ್ ಹಂಪಾ, ಅನಿಲಕುಮಾರ್ ಹಾಲಕುಡೆ, ಲಕ್ಷ್ಮಣ ಮೇತ್ರೆ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.