ಮಾಜಿ ಅಗ್ನಿವೀರರಿಗೆ ಶೇ.10 ಮೀಸಲಾತಿ ಘೋಷಿಸಿದ ಕೇಂದ್ರ ಸರಕಾರ
ಸಾಂದರ್ಭಿಕ ಚಿತ್ರ | Photo : PTI
ಹೊಸದಿಲ್ಲಿ : ಸಿಐಎಸ್ಎಫ್, ಬಿಎಸ್ಎಫ್ ಹಾಗೂ ಆರ್ಪಿಎಫ್ ನೇಮಕಾತಿಯಲ್ಲಿ ಮಾಜಿ ಅಗ್ನಿವೀರರಿಗೆ ಕೇಂದ್ರ ಸರಕಾರ ಶೇ.10 ಮೀಸಲಾತಿ ಘೋಷಿಸಿದೆ.
ಈ ನಿರ್ಧಾರದಡಿ ಅಗ್ನಿಪಥ್ ಯೋಜನೆಯಡಿ ಕೇಂದ್ರವು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಕಾನ್ಸ್ಸ್ಟೆಬಲ್ಗಳ ಶೇ.10ರಷ್ಟು ಹುದ್ದೆಗಳನ್ನು ಕಾಯ್ದಿರಿಸಲಿದೆ. ಅಲ್ಲದೇ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಪ್ರಧಾನ ಕಚೇರಿಯಲ್ಲಿ ಭೌತಿಕ ದಕ್ಷತೆ ಪರೀಕ್ಷೆಯಲ್ಲೂ ವಿನಾಯಿತಿ ನೀಡಲಿದೆ.
ಜೂ.14, 2022 ರಂದು ಅಗ್ನಿಪಥ್ ಯೋಜನೆಯನ್ನು ಘೋಷಿಸಲಾಗಿತ್ತು. ಈ ಯೋಜನೆಯಡಿ 17 ರಿಂದ 21 ವರ್ಷದ ಯುವಕರನ್ನು ಕೇವಲ 4 ವರ್ಷಗಳವರೆಗೆ ಸೇನೆಗೆ ನೇಮಿಸಲು ಅವಕಾಶ ನೀಡಲಾಗಿದೆ. ಕರ್ತವ್ಯದ ವೇಳೆ ಹುತಾತ್ಮರಾಗುವ ಅಗ್ನಿವೀರರಿಗೆ 1 ಕೋಟಿ ರೂಪಾಯಿ ಪರಿಹಾರದ ಮೊತ್ತ ಸಿಗುತ್ತದೆ ಎಂದು ಸೇನೆ ಹೇಳಿತ್ತು.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಯೋಜನೆಯು ಅಗ್ನಿವೀರರನ್ನು ‘ಯೂಸ್ ಅಂಡ್ ಥ್ರೋ ಕಾರ್ಮಿಕರು’ ಎಂದು ಸರ್ಕಾರ ಪರಿಗಣಿಸುತ್ತದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಲೋಕಸಭಾ ಚುನಾವಣೆಗೂ ಮುಂಚೆ ಅವರು ಕಾಂಗ್ರೆಸ್ ನೇತೃತ್ವದ ಸರಕಾರ ರಚನೆಯಾದರೆ ಅಗ್ನಿವೀರ್ ಯೋಜನೆ ಕೈಬಿಡಲಾಗುವುದು ಎಂದಿದ್ದರು.