ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ನೇಮಕ
Photo : x/@JayShah
ಹೊಸದಿಲ್ಲಿ : ಟೀಮ್ ಇಂಡಿಯಾದ ನೂತನ ಮುಖ್ಯ ಕೋಚ್ ಆಗಿ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ನೇಮಕಗೊಂಡಿದ್ದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಎಕ್ಸ್ ಮೂಲಕ ಮಂಗಳವಾರ ಈ ಘೋಷಣೆ ಮಾಡಿದ್ದಾರೆ.
ಈ ವರ್ಷದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಗೆಲ್ಲಲು ಮಾರ್ಗದರ್ಶನ ನೀಡಿದ್ದ ನಂತರ ರಾಹುಲ್ ದ್ರಾವಿಡ್ ಅವರ ಕೋಚ್ ಅವಧಿ ಪೂರ್ಣಗೊಂಡಿತ್ತು. ದ್ರಾವಿಡ್ರಿಂದ ತೆರವಾಗಿರುವ ಸ್ಥಾನವನ್ನು ಗಂಭೀರ್ ತುಂಬಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಹೊಸ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರನ್ನು ಸ್ವಾಗತಿಸಲು ನನಗೆ ಅಪಾರ ಸಂತೋಷವಾಗುತ್ತಿದೆ. ಆಧುನಿಕ ದಿನದ ಕ್ರಿಕೆಟ್ ವೇಗವಾಗಿ ವಿಕಸನಗೊಳ್ಳುತ್ತಿದ್ದು ಗೌತಮ್ ಈ ಬದಲಾವಣೆಯನ್ನು ಹತ್ತಿರದಿಂದ ನೋಡಿದ್ದಾರೆ. ತಮ್ಮ ವೃತ್ತಿಜೀವನದುದ್ದಕ್ಕೂ ವಿವಿಧ ಪಾತ್ರಗಳಲ್ಲಿ ಉತ್ತಮ ನಿರ್ವಹಣೆ ನೀಡಿದ ನಂತರ ಭಾರತೀಯ ಕ್ರಿಕೆಟನ್ನು ಮುನ್ನಡೆಸಲು ಗೌತಮ್ ಸೂಕ್ತ ವ್ಯಕ್ತಿ ಎಂಬ ವಿಶ್ವಾಸ ನನಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ.
ಅಪಾರ ಅನುಭವದ ಜೊತೆಗೆ ಟೀಮ್ ಇಂಡಿಯಾದ ಕುರಿತು ಗಂಭೀರ್ ಅವರಲ್ಲಿ ಸ್ಪಷ್ಟ ದೂರದೃಷ್ಟಿ ಇದೆ. ಹೊಸ ಪ್ರಯಾಣ ಆರಂಭಿಸುತ್ತಿರುವ ಗಂಭೀರ್ಗೆ ಬಿಸಿಸಿಐ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ಶಾ ಟ್ವೀಟಿಸಿದ್ದಾರೆ.
42ರ ಹರೆಯದ ಗಂಭೀರ್ ಯಶಸ್ಸಿನ ಅಲೆಯಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ಕೋಚಿಂಗ್ ಹುದ್ದೆ ವಹಿಸಿಕೊಳ್ಳಲಿದ್ದಾರೆ. ಟಿ20 ವಿಶ್ವ ಚಾಂಪಿಯನ್ ಆಗುವ ಮೊದಲು ಭಾರತವು ಕಳೆದ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹಾಗೂ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ಗೆ ತಲುಪಿತ್ತು. 2025ರಲ್ಲಿ ಸತತ ಮೂರನೇ ಬಾರಿ ಡಬ್ಲ್ಯುಟಿಸಿ ಫೈನಲ್ಗೆ ತಲುಪುವ ವಿಶ್ವಾಸದಲ್ಲಿದೆ.
ಡಿಸೆಂಬರ್ 2027ರ ತನಕ ಮೂರೂವರೆ ವರ್ಷಗಳ ಅವಧಿಗೆ ನೂತನ ಮುಖ್ಯ ಕೋಚ್ ಅನ್ನು ಜುಲೈನಲ್ಲಿ ನೇಮಕ ಮಾಡಲಾಗುವುದು ಎಂದು ಬಿಸಿಸಿಐ ಈ ಹಿಂದೆ ಪ್ರಕಟಿಸಿತ್ತು.
ಕೋಚ್ ಹುದ್ದೆಗಾಗಿ ಬಿಸಿಸಿಐ ಜಾಹೀರಾತನ್ನು ನೀಡಿತ್ತು. ಮೇ 27ರಂದು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿಪಡಿಸಿತ್ತು. ಕ್ರಿಕೆಟ್ ಮಂಡಳಿಯು 2024ರ ಐಪಿಎಲ್ ವೇಳೆ ಗಂಭೀರ್ ಜೊತೆಗೂ ಚರ್ಚಿಸಿತ್ತು. ಗಂಭೀರ್ ಈ ವರ್ಷದ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಲಹೆಗಾರನಾಗಿದ್ದಾರೆ.
2023ರ ನವೆಂಬರ್ನಲ್ಲಿ ಕೆಕೆಆರ್ ಸೇರ್ಪಡೆಯಾಗುವ ಮೊದಲು ಗಂಭೀರ್ 2022 ಹಾಗೂ 2023ರಲ್ಲಿ ಲಕ್ನೊ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದರು. ಎರಡೂ ಋತುವಿನಲ್ಲಿ ಪ್ಲೇ ಆಫ್ ಸುತ್ತಿಗೇರಲು ಲಕ್ನೊಗೆ ನೆರವಾಗಿದ್ದರು.
ಕೋಚ್ ಆಗಿ ಐಪಿಎಲ್ ತಂಡಗಳೊಂದಿಗೆ ಕೆಲಸ ಮಾಡಿರುವ ಗಂಭೀರ್ ತಮ್ಮ ವೃತ್ತಿಜೀವನದಲ್ಲಿ ಭಾರತವು 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಈ ಎರಡು ಟೂರ್ನಮೆಂಟ್ಗಳ ಫೈನಲ್ನಲ್ಲಿ ಭಾರತದ ಪರ ಗರಿಷ್ಠ ರನ್ ಗಳಿಸಿದ್ದರು. 2012 ಹಾಗೂ 2014ರಲ್ಲಿ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ ಐಪಿಎಲ್ ಪ್ರಶಸ್ತಿ ಜಯಿಸಿತ್ತು.
ನನಗೆ ಕೋಚ್ ಹುದ್ದೆ ಮೇಲೆ ಆಸಕ್ತಿ ಇಲ್ಲ ಎಂದು ಭಾರತದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಸ್ಪಷ್ಟಪಡಿಸಿದ ನಂತರ ಗಂಭೀರ್ ಕೋಚ್ ಹುದ್ದೆಯ ರೇಸ್ನಲ್ಲಿ ಮುಂಚೂಣಿಯಲ್ಲಿದ್ದರು. ಜೂನ್ 1ರಂದು ಅಬುಧಾಬಿಯಲ್ಲಿ ಭಾರತದ ಕೋಚ್ ಆಗುವ ಬಯಕೆಯನ್ನು ಗಂಭೀರ್ ವ್ಯಕ್ತಪಡಿಸಿದ್ದರು.
2021ರಲ್ಲಿ ಟಿ20 ವಿಶ್ವಕಪ್ ಕೊನೆಗೊಂಡ ನಂತರ ಕೋಚ್ ರವಿ ಶಾಸ್ತ್ರಿ ಉತ್ತರಾಧಿಕಾರಿಯಾಗಿ ಎರಡು ವರ್ಷಗಳ ಅವಧಿಗೆ 2023ರ ಏಕದಿನ ವಿಶ್ವಕಪ್ ತನಕ ದ್ರಾವಿಡ್ ಆಯ್ಕೆಯಾಗಿದ್ದರು. 2024ರ ಟಿ20 ವಿಶ್ವಕಪ್ ತನಕವೂ ಕೋಚ್ ಆಗಿ ಮುಂದುವರಿಯಬೇಕೆಂಬ ಬಿಸಿಸಿಐ ಮನವಿಗೆ ದ್ರಾವಿಡ್ ಸಮ್ಮತಿಸಿದ್ದರು. ದ್ರಾವಿಡ್ 2013ರ ನಂತರ ಭಾರತವು ಮೊದಲ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಮಾರ್ಗದರ್ಶನ ನೀಡಿದ್ದಾರೆ.