ಶಮಿ ದಾಳಿಗೆ ಉದುರಿದ ಕಿವೀಸ್, ಫೈನಲ್ಗೆ ಭಾರತ
ವಿಶ್ವಕಪ್ನಲ್ಲಿ ನ್ಯೂಝಿಲ್ಯಾಂಡ್ ಎದುರು ಇಂಡಿಯಾದ ಅಜೇಯ ಓಟ
Photo : cricketworldcup.com
ಮುಂಬೈ: ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಭಾರತ ತಂಡ ನ್ಯೂಝಿಲ್ಯಾಂಡ್ ವಿರುದ್ಧ 70 ರನ್ ಗಳ ಗೆಲುವು ಸಾಧಿಸಿದೆ.
ಮುಹಮ್ಮದ್ ಶಮಿ ಶಿಸ್ತುಬದ್ದ ಬೌಲಿಂಗ್ ದಾಳಿ ವಿರಾಟ್ ಮತ್ತು ಶ್ರೇಯಸ್ ಅಮೋಘ ಶತಕದ ನೆರವಿನಿಂದ ಭಾರತ ಸೆಮಿಫೈನಲ್ನಲ್ಲಿ ನ್ಯೂಝಿಲ್ಯಾಂಡ್ ಮಣಿಸಿ ಕಳೆದ ಬಾರಿಯ ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡಿದೆ.
ವಿರಾಟ್ ಸಾರ್ವಕಾಲಿಕ ದಾಖಲೆಯ 50 ನೇ ಏಕದಿನ ಶತಕ ಹಾಗೂ ಮುಹಮ್ಮದ್ ಶಮಿ ಜೀವನ ಶ್ರೇಷ್ಠ ವಿಶ್ವಕಪ್ನ 4 ಐದು ವಿಕೆಟ್ ಗೊಂಚಲು ನೆರವಿಂದ ಭಾರತ ಫೈನಲ್ ಪ್ರವೇಶಿಸಿದೆ.
ಭಾರತ ನೀಡಿದ 398 ರನ್ ಗುರಿ ಬೆನ್ನತ್ತಿದ ಕಿವೀಸ್ ತೀವ್ರ ಹೋರಾಟ ನೀಡಿ ಸೋಲೊಪ್ಪಿಕೊಂಡಿದೆ. ಭಾರತದ ಕಠಿಣ ಗುರಿ ಬೆನ್ನತ್ತಲು ಸ್ಟೋಟಕ ಆರಂಭದ ನಿರೀಕ್ಷೆಯಲ್ಲಿ ಬ್ಯಾಟಿಂಗ್ ಗೆ ಬಂದಿದ್ದ ಕಿವೀಸ್ ಗೆ ಮುಹಮ್ಮದ್ ಶಮಿ ಆರಂಭಿಕ ಆಘಾತ ನೀಡಿದರು. ನ್ಯೂಝಿಲ್ಯಾಂಡ್ ಓಪನರ್ ಗಳಾದ ಡೆವೋನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಕ್ರಮವಾಗಿ 13 ರನ್ ಗೆ ಮುಹಮ್ಮದ್ ಶಮಿ ಎಸೆತದಲ್ಲಿ ವಿಕೆಟ್ ಕೀಪರ್ ಕೆ ಎಲ್ ರಾಹುಲ್ ಗೆ ಕ್ಯಾಚಿತ್ತು ಔಟ್ ಆದರು. ಬಳಿಕ ಬ್ಯಾಟಿಂಗ್ ಬಂದ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಡೆರಲ್ ಮಿಚೆಲ್ ಜೋಡಿ, ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಚೇತರಿಕೆ ನೀಡುವಲ್ಲಿ ಯಶಸ್ವಿ ಯಾದರು. ಭಾರತೀಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ವಿಲಿಯಮ್ಸನ್ 69 ರನ್ ಗಳಿಸಿ ಶಮಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದರೆ, ಡರೆಲ್ ಮಿಚೆಲ್ 119 ಎಸೆತಗಳಲ್ಲಿ 9 ಬೌಂಡರಿ 7 ಸಿಕ್ಸರ್ ಸಹಿತ 134 ರನ್ ನೆರವಿನಿಂದ ಸ್ಟೋಟಕ ಬ್ಯಾಟಿಂಗ್ ಮುಂದುವರಿಸಿ ಕಿವೀಸ್ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಶಮಿ ಬೌಲಿಂಗ್ ನಲ್ಲಿ ಜಡೇಜಾಗೆ ವಿಕೆಟ್ ನೀಡಿ ಪೆವಿಲಿಯನ್ ಸೇರಿಕೊಂಡರು.
ಗ್ಲೆನ್ ಫಿಲಿಪ್ಸ್ 49 , ಮಾರ್ಕ್ ಚಾಪ್ಮನ್ 2 , ಸಾಂಟ್ನರ್ 9 ಹಾಗೂ ಟಿಮ್ ಸೌಥಿ 9, ಬೌಲ್ಟ್ 2 ರನ್ ಗಳಿಸಿದರು. ಕಡೇ ಗಳಿಗೆಯಲ್ಲಿ ವಿಕೆಟ್ ಒಪ್ಪಿಸಿದ ಲೋಕಿ ಫರ್ಗ್ಯೂಸನ್ 6 ರನ್ ಬಾರಿಸಿದರು. ನ್ಯೂಝಿಲ್ಯಾಂಡ್ 48.5 ಓವರ್ 327 ರನ್ ಪೇರಿಸಿ ಆಲೌಟ್ ಆಯಿತು.
ಭಾರತದ ಪರ ಶ್ರೇಷ್ಟ ಸಾಧನೆ ಮಾಡಿದ ಮುಹಮ್ಮದ್ ಶಮಿ 7 ವಿಕೆಟ್ ಪಡೆದುಕೊಂಡರು. ಬುಮ್ರಾ ಸಿರಾಜ್ ಹಾಗೂ ಕುಲ್ ದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದುಕೊಂಡರು.