ಲಂಕಾವನ್ನು ಸೋಲಿಸಿ ಸೆಮಿಗೆ ಹತ್ತಿರವಾದ ಕಿವೀಸ್
ವಿಶ್ವಕಪ್ ನಲ್ಲಿ ಕಳಪೆ ಪ್ರದರ್ಶನ ಮುಂದುವರೆಸಿದ ಶ್ರೀಲಂಕಾ
PHOTO : x/@BLACKCAPS
ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ 5 ವಿಕೆಟ್ ಗಳ ಗೆಲುವು ಸಾಧಿಸಿದೆ. ಆ ಮೂಲಕ ಸೆಮಿ ಫೈನಲ್ ಹಾದಿ ಸಮೀಪಿಸಿದೆ.
ಸೆಮೀಸ್ ಗೇರಲು ಕಡ್ಡಾಯವಾಗಿ ದೊಡ್ಡ ಗೆಲುವಿನ ಬೆನ್ನು ಬಿದ್ದದ್ದ ಕಿವೀಸ್ ತಂಡಕ್ಕೆ ಶ್ರೀಲಂಕಾ ಸುಲಭ ತುತ್ತಾಯಿತು. ಈ ಸೋಲಿನೊಂದಿಗೆ ಶ್ರೀಲಂಕಾ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿಯೇ ಮುಂದುವರಿದು, ಚಾಂಪಿಯನ್ಸ್ ಟ್ರೋಫಿಯಿಂದ ಬಹುತೇಕ ಹೊರಬಿದ್ದಿದೆ.
ಲಂಕಾ ನೀಡಿದ್ದ ಅಲ್ಪ ಗುರಿ ಬೆನ್ನಟ್ಟಿವಲ್ಲಿ ನ್ಯೂಝಿಲ್ಯಾಂಡ್ ತಂಡ ಸ್ಟೋಟಕ ಆರಂಭ ಪಡೆಯಿತು. ಪಂದ್ಯವನ್ನು ಬೇಗ ಮುಗಿಸಬೇಕೆಂಬ ಉದ್ದೇಶ ದಿಂದ ಬ್ಯಾಟಿಂಗ್ ಗೆ ಬಂದಿದ್ದ ಕಿವೀಸ್ ಬ್ಯಾಟರ್ಗಳು ಲಂಕಾ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. ಮೊದಲ ವಿಕೆಟ್ ಪತನಕ್ಕೆ, 12.2 ಓವರ್ ಗಳಲ್ಲಿ 86 ರನ್ ಗಳ ಸ್ಟೋಟಕ ಜೊತೆಯಾಟ ನೀಡಿದ್ದ ಕಾನ್ವೆ- ರಚಿನ್ ಜೋಡಿ ಪಂದ್ಯವನ್ನು ಏಕಪಕ್ಷೀಯವಾಗಿ ಇರುವಂತೆ ನೋಡಿಕೊಂಡರು. ಓಪನರ್ ಡೆವೊನ್ ಕಾನ್ವೆ 45 ರನ್ ಗೆ ಚಮೀರ ಬೌಲಿಂಗ್ ನಲ್ಲಿ ಧನಂಜಯ ಡಿಸಿಲ್ವ ಗೆ ಕ್ಯಾಚಿತ್ತು ಔಟ್ ಆದರೆ, ರಚಿನ್ ರವೀಂದ್ರ 42 ರನ್ ಗಳಿಸಿ ದೊಡ್ಡ ಮೊತ್ತ ಪೇರಿಸಲು ಹೋಗಿ ತೀಕ್ಷಣ ಸ್ಪಿನ್ ಮೋಡಿಗೆ ಬಲಿಯಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದಿದ್ದ ನಾಯಕ ಕೇನ್ ವಿಲಿಯಮ್ಸನ್ ಕೇವಲ 14 ರನ್ ಬಾರಿಸಿ 18.2 ಓವರ್ ನಲ್ಲಿ ಮ್ಯಾಥೂಸ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಮಾರ್ಕ್ ಚಾಪ್ಮನ್ 7 ರನ್ ಗೆ ರನೌಟ್ ಆದರು.
ಬಳಿಕ ತಂಡದ ಗೆಲುವಿನ ಜವಾಬ್ದಾರಿ ಹೆಗಲೇರಿಸಿಕೊಂಡ ಡೆರೆಲ್ ಮಿಷೆಲ್ ಟೂರ್ನಿಯಲ್ಲಿ ಮತ್ತೊಂದು ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು. ಬೌಂಡರಿ-ಸಿಕ್ಸರ್ ಮೂಲಕ ಆಟ ಮುಂದುವರಿಸಿದ ಮಿಷೆಲ್ ನೆರದಿದ್ದ ಅಭಿಮಾನಿಗಳಿಗೆ ಮನರಂಜನೆ ನೀಡಿದರು. 5 ಬೌಂಡರಿ 2 ಸಿಕ್ಸರ್ ಸಹಿತ 43 ರನ್ ಬಾರಿಸಿದ ಡೆರಲ್ ಮಿಷೆಲ್ ತಂಡವನ್ನು ಗೆಲುವಿನ ಹತ್ತಿರ ತಂದರು. ಗ್ಲೆನ್ ಫಿಲಿಪ್ಸ್ 13 ರನ್ ಗಳಿಸಿದರೆ, ಟಾಮ್ ಲ್ಯಾಥಮ್ 2 ರನ್ ಗಳಿಸಿದರು.
ಏಂಜಲೋ ಮ್ಯಾಥ್ಯೂಸ್ 2 ವಿಕೆಟ್ ಪಡೆದರು. ಮಹೇಶ ತೀಕ್ಷಣ, ದುಶ್ಮಂತ ಚಮೀರ ತಲಾ ಒಂದು ವಿಕೆಟ್ ಪಡೆದರು