ಮ್ಯಾಕ್ಸ್ವೆಲ್ ದ್ವಿಶತಕ, ಆಸೀಸ್ಗೆ ರೋಚಕ ಜಯ
2023ರ ವಿಶ್ವಕಪ್ ನಲ್ಲಿ ಮೊದಲ ದ್ವಿಶತಕ ದಾಖಲಿಸಿದ ಆಸ್ಟ್ರೇಲಿಯಾ ಬ್ಯಾಟರ್
PHOTO : cricketworldcup.com
ಮುಂಬೈ: ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ರೋಚಕ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ 201 ರನ್ ಗಳ ಸ್ಟೋಟಕ ಆಟದ ನೆರವಿಂದ ಆಸ್ಟ್ರೇಲಿಯ 3 ವಿಕೆಟ್ ಗಳ ಜಯ ಸಾಧಿಸಿದೆ.
ಗ್ಲೇನ್ ಮ್ಯಾಕ್ಸ್ ವೆಲ್ ಏಕಾಂಗಿ ಹೊರಾಟ ಹಾಗೂ ಪ್ಯಾಟ್ ಕಮ್ಮಿನ್ಸ್ ರಕ್ಷಣಾತ್ಮಕ ಜೊತೆಯಾಟದ ನೆರವಿನಿಂದ ಬಹುತೇಕ ಸೋಲಿನಂಚಿಗೆ ತಲುಪಿದ್ದ ಆಸ್ಟ್ರೇಲಿಯ ತಂಡ ಅಫ್ಘಾನಿಸ್ತಾನ ನೀಡಿದ್ದ 292 ರನ್ ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಈ ಗೆಲುವಿನ ಮೂಲಕ ಆಸೀಸ್ ಅಗ್ರ ನಾಲ್ಕರ ಘಟ್ಟಕ್ಕೆ ಸ್ಥಾನ ಭದ್ರಪಡಿಸಿತು. ಸೋತ ಅಫ್ಘಾನ್ ಸೆಮೀಸ್ ಗೇರಲು ಮುಂದಿನ ಪಂದ್ಯ ಕಡ್ಡಾಯವಾಗಿ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ.
ಅಫ್ಘಾನಿಸ್ತಾನ ನೀಡಿದ ಗುರಿ ಬೆನ್ನಟ್ಟಲು ಬ್ಯಾಟಿಂಗ್ ಗೆ ಬಂದ ಆಸೀಸ್ ಆರಂಭಿಕರು ಕಳಪೆ ಆಟ ಪ್ರದರ್ಶಿಸಿದರು. ಉತ್ತಮ ಅಡಿಪಾಯ ಹಾಕಬೇಕಿದ್ದ ಓಪನರ್ ಗಳು ಅಫ್ಘಾನ್ ಸಂಘಟಿತ ದಾಳಿಯ ಮುಂದೆ ಮಂಕಾದರು. ಅಝ್ಮತುಲ್ಲಾ ಹಾಗೂ ನವೀನ್ ಅರಂಭಿಕ ದಾಳಿಗೆ ತತ್ತರಿದ ಆಸೀಸ್ ಬ್ಯಾಟರ್ ಗಳು 18.3 ಓವರ್ ಒಳಗಡೆಯೇ ಪ್ರಮುಖ 7 ವಿಕೆಟ್ ಕಳೆದುಕೊಂಡು ಬಹುತೇಕ ಸೋಲಿನ ಕಡೆ ಹೆಜ್ಜೆ ಹಾಕಿದ್ದರು. ಅಫ್ಘಾನ್ ಆರಂಭಿಕ ಬೌಲಿಂಗ್ ದಾಳಿಗೆ ಬೆದರಿದ ಆಸ್ಟ್ರೇಲಿಯ ಓಪನರ್ ವಾರ್ನರ್ 18 ಹಾಗೂ ಜೋಸ್ ಇಂಗ್ಲಿಸ್ ಶೂನ್ಯಕ್ಕೆ ಅಝ್ಮತುಲ್ಲಾಗೆ ವಿಕೆಟ್ ಒಪ್ಪಿಸಿದರೆ, ಟ್ರಾವಿಸ್ ಹೆಡ್, ಮಿಷೆಲ್ ಮಾರ್ಶ್ ಕ್ರಮವಾಗಿ 0, 24 ಕ್ಕೆ ನವೀನ್ ಉಲ್ ಹಕ್ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. 14. 1 ಓವರ್ ನಲ್ಲಿ ರಹ್ಮತ್ ಶಾ ಅದ್ಭುತ ನೇರ ಎಸೆತದಲ್ಲಿ ರನೌಟ್ ಬಲಿಯಾದ ಮಾರ್ನಸ್ ಲಬುಶೇನ್ 14 ರನ್ ಗಳಿಸಿದ್ದರು. ಬಳಿಕ ಬೌಲಿಂಗ್ ದಾಳಿ ಮುಂದುವರಿಸಿದ ರಶೀದ್ ಖಾನ್ , ಮಾರ್ಕಸ್ ಸ್ಟೋಯಿನಿಸ್ ಹಾಗೂ ಮಿಷೆಲ್ ಸ್ಟಾರ್ಕ್ ರನ್ನು ಕ್ರಮಾವಾಗಿ 6, 3 ರನ್ ಗೆ ಔಟ್ ಮಾಡಿದರು. ಬ್ಯಾಟರ್ ಗಳ ಪೆವಿಲಿಯನ್ ಪರೇಡ್ ನಡುವೆಯೂ ಏಕಾಂಗಿಯಾಗಿ ತಂಡ ಗೆಲ್ಲಿಸಿದ ಗ್ಲೇನ್ ಮ್ಯಾಕ್ಸ್ ಸ್ಟೋಟಕ 201 ಬಾರಿಸಿ ಟೂರ್ನಿಯ ಮೊದಲ ದ್ವಿಶತ ದಾಖಲಿಸಿದರು. ಗೆಲ್ಲಲು ಅಸಾಧ್ಯ ವಾಗಿದ್ದ ಪಂದ್ಯದಲ್ಲಿ 128 ಎಸೆತ ಎದುರಿಸಿದ ಮಾಕ್ಸ್ ವೆಲ್ 21 ಬೌಂಡರಿ 10 ಸಿಕ್ಸರ್ ಸಹಿತ 201 ರನ್ ಬಾರಿದರು. ಅವರಿಗೆ ಸಾಥ್ ನೀಡಿದ್ದ ಪ್ಯಾಟ್ ಕಮ್ಮಿನ್ಸ್ 68 ಎಸೆತ ಎದುರಿಸಿ ಕೇವಲ 12 ರನ್ ಗಳಿಸಿದ್ದರು.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಅಫ್ಘಾನಿಸ್ತಾನ ಈ ಪಂದ್ಯ ಗೆಲ್ಲುವ ಅವಕಾಶ ಕಳೆದುಕೊಂಡಿತು. ಸ್ಪಿನ್ನರ್ ನೂರ್ ಓವರ್ನಲ್ಲಿ ನೀಡಿದ್ದ ಕ್ಯಾಚ್ ಅನ್ನು ಫೀಲ್ದರ್ ಮುಜೀಬ್ ಕೈಚೆಲ್ಲಿದರು. ಜೀವದಾನ ಪಡೆದ ಬ್ಯಾಟರ್ ಮ್ಯಾಕ್ಸ್ವೆಲ್ ಗಾಯಗೊಂಡರೂ, ನಾಯಕ ಕಮ್ಮಿನ್ಸ್ ಜೊತೆಗೆ ಬೃಹತ್ ಜೊತೆಯಾಟ ನಡೆಸಿ ಅಫ್ಘಾನಿಸ್ತಾನಕ್ಕೆ ಸೋಲುಣಿಸಿದರು.
ಅಫ್ಘಾನಿಸ್ತಾನ ಪರ ನವೀನ್ ಉಲ್ ಹಕ್, ಅಝ್ಮತುಲ್ಲಾ , ರಶೀದ್ ಖಾನ್ ತಲಾ 2 ವಿಕೆಟ್ ಪಡೆದರು.