ಪಾಕಿಸ್ತಾನಕ್ಕೆ ನೆದರ್ ಲ್ಯಾಂಡ್ ವಿರುದ್ಧ 81 ರನ್ ಗಳ ಜಯ
ವಿಶ್ವಕಪ್ ಕ್ರಿಕೆಟ್ 2 ನೇ ಪಂದ್ಯ, ನೆದರ್ ಲ್ಯಾಂಡ್ 205 ಕ್ಕೆ ಆಲೌಟ್
Photo : x/@saifahmed75
ಹೈದರಾಬಾದ್ : ಇಲ್ಲಿನ ಉಪ್ಪಳ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ಪಕಪ್ ಕ್ರಿಕೆಟ್ 2023ರ 2ನೇ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೆದರ್ಲ್ಯಾಂಡ್ಸ್ ವಿರುದ್ಧ 81 ರನ್ ಗಳ ಜಯಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು 49 ಓವರ್ಗಳಲ್ಲಿ 286 ರನ್ ಪೇರಿಸಿ ಆಲೌಟ್ ಆಯಿತು. 287 ರನ್ ಗಳ ಗುರಿ ಬೆನ್ನು ಹತ್ತಿದ ನೆದರ್ ಲ್ಯಾಂಡ್ ತಾಳ್ಮೆಯ ಆಟವಾಡಿತು. ಮೊದಲ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಒʼಡೌಡ್ ಪಾಕಿಸ್ತಾನದ ಬೌಲರ್ಗಳ ಲಯ ಅರಿತು ಬ್ಯಾಟ್ ಬೀಸಿದರು. 5.5 ಓವರ್ಗಳಲ್ಲಿ 28 ರನ್ ಗಳಿಸಿದ್ದಾಗ ಒʼಡೌಡ್ ಅವರು ಹಸನ್ ಅಲಿ ಅವರ ಬೌಲಿಂಗ್ ನಲ್ಲಿ ಶಾಹಿನ್ ಅಫ್ರಿದಿಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. 2 ನೇ ವಿಕೆಟ್ ಕುಸಿತ ಕಂಡಾಗ ನೆದರ್ ಲ್ಯಾಂಡ್ 50 ರನ್ ಗಳಿಸಿತ್ತು.
ನೆದರ್ ಲ್ಯಾಂಡ್ ನ ರನ್ ಗಳಿಕೆಗೆ ವೇಗ ನೀಡಿದ್ದು ವಿಕ್ರಮಜಿತ್ ಸಿಂಗ್ ಹಾಗೂ ಬಾಸ್ ಡೆ ಲೀಡೆ. ಇಬ್ಬರೂ ಕ್ರಮವಾಗಿ 52, 67 ರನ್ ಗಳಿಸಿ ತಂಡವನ್ನು ಗೆಲುವಿನ ಹಾದಿಯತ್ತ ಕೊಂಡಯೊಯ್ಯುವ ಮುನ್ಸೂಚನೆ ನೀಡಿದರು. ಆದರೆ ಇದಕ್ಕೆ ಪಾಕಿಸ್ತಾನದ ಬೌಲರ್ಗಳು ಅವಕಾಶ ನೀಡಲಿಲ್ಲ. ಮುಹಮ್ಮದ್ ನವಾಝ್ ಅವರ ಎಸೆತದಲ್ಲಿ ಬಾಸ್ ಡೆ ಲೀಡೆ ಕ್ಲೀನ್ ಬೌಲ್ಡ್ ಆದರು. 6 ಬೌಂಡರಿ 2 ಸಿಕ್ಸರ್ ಗಳ ಅವರ ಆಟ ಹೈದರಾಬಾದ್ ನ ಪ್ರೇಕ್ಷಕರಿಗೆ ಮನ ತಣಿಸಿತು. 67 ಎಸೆತ ಎದುರಿಸಿದ್ದ ವಿಕ್ರಮಜಿತ್ ಸಿಂಗ್ 52 ರನ್ ಗಳಿಸಿ ಉತ್ತಮ ಆಟ ಪ್ರದರ್ಶಿಸಿದರು.
ನೆದರ್ ಲ್ಯಾಂಡ್ 133 ರನ್ ಗಳಿಸಿದ್ದಾಗ ಹಾರಿಸ್ ರೌಫ್ ಅವರು ಸತತ ಎರಡು ವಿಕೆಟ್ ಗಳಿಸಿ ಹ್ಯಾಟ್ರಿಕ್ ಅವಕಾಶಕ್ಕಾಗಿ ಕಾದರು. ನೆದರ್ ಲ್ಯಾಂಡ್ ಬ್ಯಾಟರ್ ಗಳು ಇದಕ್ಕೆ ಅವಕಾಶ ನೀಡಲಿಲ್ಲ. ಅಂತಿಮವಾಗಿ ನೆದರ್ ಲ್ಯಾಂಡ್ ವಿಕೆಟ್ ಪತನ ಕಾಣುತ್ತಾ 205 ರನ್ ಗೆ ಆಲೌಟ್ ಆಗಿ ಪಾಕಿಸ್ತಾನದ ಎದುರು 81 ರನ್ ಗಳ ಸೋಲೊಪ್ಪಿಕೊಂಡಿತು. ಪಾಕಿಸ್ತಾನ ಪರ ಹಾರಿಸ್ ರೌಫ್ 3 ವಿಕೆಟ್ ಪಡೆದರು. ಹಸನ್ ಅಲಿ 2 ವಿಕೆಟ್, ಶಾಹಿನ್ ಅಫ್ರಿದಿ, ಇಫ್ತಿಕಾರ್ ಅಹ್ಮದ್,ಮೊಹಮ್ಮದ್ ನವಾಝ್, ಶದಾಬ್ ಖಾನ್ ತಲಾ ಒಂದು ವಿಕೆಟ್ ಪಡೆದರು.
ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡವು 49 ಓವರ್ಗಳಲ್ಲಿ 286 ರನ್ ಪೇರಿಸಿ ಆಲೌಟ್ ಆಯಿತು. ಪಾಕಿಸ್ತಾನ ತಂಡ ಆರಂಭಿಕ ವೈಫಲ್ಯದ ನಡುವೆಯೂ ರಿಜ್ವಾನ್ 68, ಸೌದ್ ಶಕೀಲ್ 68, ನವಾಝ್ 39, ಹಾಗೂ ಶದಾಬ್ 32 ರನ್ ಗಳಿಸಿದರು . ನೆದರ್ಲ್ಯಾಂಡ್ಸ್ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಬಾಸ್ ಡೆ ಲೀಡೆ 4 ವಿಕೆಟ್ ಪಡೆದರೆ, ಆರ್ಯನ್ ದತ್, ವಾನ್ ಬೀಕ್, ಆಕೆರ್ಮಾನ್ ಹಾಗೂ ಮೀಕೆರನ್ ತಲಾ ಒಂದೊಂದು ವಿಕೆಟ್ಗಳನ್ನು ಕಬಳಿಸಿದ್ದರು