ಸಂಸತ್ತು ವಿಸರ್ಜಿಸಿದ ಬಾಂಗ್ಲಾದೇಶದ ಅಧ್ಯಕ್ಷ
ಭಾರತಕ್ಕೆ ಪಲಾಯನ ಮಾಡುತ್ತಿದ್ದ ಸಚಿವ ಜುನೈದ್ ಪಲಕ್ ಬಂಧನ
ಬಾಂಗ್ಲಾದೇಶದ ಅಧ್ಯಕ್ಷ ಮುಹಮ್ಮದ್ ಶಹಾಬುದ್ದೀನ್ | PC : newsonair.gov.in
ಢಾಕಾ : ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ, ಬಾಂಗ್ಲಾದೇಶದ ಅಧ್ಯಕ್ಷ ಮುಹಮ್ಮದ್ ಶಹಾಬುದ್ದೀನ್ ಈ ವರ್ಷದ ಜನವರಿ 7 ರ ರಾಷ್ಟ್ರೀಯ ಚುನಾವಣೆಯ ನಂತರ ರಚನೆಯಾದ ಸಂಸತ್ತನ್ನು ವಿಸರ್ಜಿಸಿದ್ದಾರೆ.
ಸಶಸ್ತ್ರ ಪಡೆಗಳ ಮುಖ್ಯಸ್ಥರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ನಾಗರಿಕ ಸಮಾಜದ ಪ್ರತಿನಿಧಿಗಳು ಮತ್ತು ಮೀಸಲಾತಿ ವಿರೋಧಿ ವಿದ್ಯಾರ್ಥಿ ಚಳವಳಿಯ ಮುಖಂಡರೊಂದಿಗೆ ಬಾಂಗ್ಲಾದೇಶದ ಅಧಿಕೃತ ನಿವಾಸ ಬಂಗಬಾಬನ್ ನಲ್ಲಿ ಸಭೆ ನಡೆಸಿದ ನಂತರ ಬಾಂಗ್ಲಾದೇಶದ ಅಧ್ಯಕ್ಷರು ಸಂಸತ್ತನ್ನು ವಿಸರ್ಜಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಶೇಖ್ ಹಸೀನಾ ಪ್ರಕ್ಷುಬ್ದವಾಗಿದ್ದ ಬಾಂಗ್ಲಾದೇಶವನ್ನು ತೊರೆದ ಕೆಲವೇ ಗಂಟೆಗಳ ನಂತರ, ಬಾಂಗ್ಲಾದೇಶದ ಸೇನಾ ಮುಖ್ಯಸ್ಥರು ಮಧ್ಯಂತರ ಸರ್ಕಾರವನ್ನು ರಚಿಸುವುದಾಗಿ ಘೋಷಿಸಿದರು. ಸರ್ಕಾರದ ರಚನೆಯ ವಿವರಗಳು ಇನ್ನಷ್ಟೇ ಹೊರಬರಲಿದೆ. ಈ ಮಧ್ಯೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಡಾ. ಮುಹಮ್ಮದ್ ಯೂನಸ್ ಅವರು ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿದ್ದಾರೆ ಎಂದು ವಿದ್ಯಾರ್ಥಿ ಸಂಘಟನೆಯೊಂದು ಪ್ರಕಟಿಸಿದೆ.
ಈ ಮಧ್ಯೆ ಉಚ್ಚಾಟಿತ ಅವಾಮಿ ಲೀಗ್ ಸರ್ಕಾರದ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವ ಜುನೈದ್ ಅಹ್ಮದ್ ಪಲಕ್ ಅವರನ್ನು ಢಾಕಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಅವರು ಹೊಸದಿಲ್ಲಿಗೆ ಪರಾರಿಯಾಗಲು ಯತ್ನಿಸುತ್ತಿದ್ದರು ಎನ್ನಲಾಗಿದೆ. ಸಿಬ್ಬಂದಿಗಳು ಅವರನ್ನು ವಶಕ್ಕೆ ಪಡೆದರು ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.