ಈ ಸಲ ಕಪ್ RCB ಯದ್ದೇ!
WPL | RCBಗೆ ಪ್ರಶಸ್ತಿಯ ಬರ ನೀಗಿಸಿದ ಮಹಿಳಾ ತಂಡ
Photo : X/@wplt20
ಹೊಸದಿಲ್ಲಿ : ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಎರಡನೇ ಆವೃತ್ತಿಯ ವಿಮೆನ್ ಪ್ರೀಮಿಯರ್ ಲೀಗ್ ನಲ್ಲಿ RCB ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚಾಂಪಿಯನ್ ಆಗುವ ಮೂಲಕ, ತಂಡಕ್ಕಿದ್ದ ಪ್ರಶಸ್ತಿಯ ಬರ ನೀಗಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 114 ರನ್ ಗಳ ಸಾಧಾರಣ ಮೊತ್ತ ಬೆನ್ನತ್ತಿದ RCB ತಂಡವು 19.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 8 ವಿಕೆಟ್ ಗಳ ಅಂತರದಿಂದ ಜಯಭೇರಿ ಭಾರಿಸಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ರಶಸ್ತಿ ಜಯಿಸುವಲ್ಲಿ ಎರಡನೇ ಬಾರಿಯೂ ಎಡವಿದೆ.
ಶ್ರೇಯಾಂಕಾ ಪಾಟೀಲ್(4-12) ನೇತೃತ್ವದ ಸ್ಪಿನ್ನರ್ಗಳ ಸೊಗಸಾದ ಬೌಲಿಂಗ್, ಎಲ್ಲಿಸ್ ಪೆರ್ರಿ(ಔಟಾಗದೆ 35 ರನ್, 37 ಎಸೆತ), ಸೋಫಿ ಡಿವೈನ್(32 ರನ್, 27 ಎಸೆತ) ಹಾಗೂ ನಾಯಕಿ ಸ್ಮತಿ ಮಂಧಾನ(31 ರನ್, 39 ಎಸೆತ)ಸಂಘಟಿತ ಬ್ಯಾಟಿಂಗ್ ನೆರವಿನಿಂದ ಮಹಿಳೆಯರ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್ ಗಳಿಂದ ಮಣಿಸಿದೆ. ಈ ಮೂಲಕ ಮೊದಲ ಬಾರಿ ಡಬ್ಲ್ಯುಪಿಎಲ್ ಟಿ-20 ಟೂರ್ನಿಯಲ್ಲಿ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.
ರವಿವಾರ ಅರುಣ್ ಜೇಟ್ಲಿ ಸ್ಟೇಡಿಯಮ್ನಲ್ಲಿ ಗೆಲ್ಲಲು 114 ರನ್ ಗುರಿ ಬೆನ್ನಟ್ಟಿದ ಆರ್ಸಿಬಿ 19.3 ಓವರ್ಗಳಲ್ಲಿ 2 ವಿಕೆಟ್ ಗಳ ನಷ್ಟಕ್ಕೆ 115 ರನ್ ಗಳಿಸಿದೆ.
ಮಂಧಾನ ಹಾಗೂ ಡಿವೈನ್ 8.1 ಓವರ್ಗಳಲ್ಲಿ 49 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಎರ್ರಿಸ್ ಪೆರ್ರಿ ಹಾಗೂ ರಿಚಾ ಘೋಷ್(ಔಟಾಗದೆ 17)3ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 33 ರನ್ ಸೇರಿಸಿ ತಂಡಕ್ಕೆ ಇನ್ನೂ 3 ಎಸೆತಗಳು ಬಾಕಿ ಇರುವಾಗಲೇ ರೋಚಕ ಗೆಲುವು ತಂದುಕೊಟ್ಟರು.
ಇದಕ್ಕೂ ಮೊದಲು ಟಾಸ್ ಜಯಿಸಿದ ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ ಬ್ಯಾಟಿಂಗ್ ಆಯ್ದುಕೊಂಡರು.
ಡೆಲ್ಲಿ ಪರ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ(44 ರನ್, 27 ಎಸೆತ, 2 ಬೌಂಡರಿ,1 ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಇನಿಂಗ್ಸ್ ಆರಂಭಿಸಿದ ಲ್ಯಾನಿಂಗ್(23 ರನ್, 23 ಎಸೆತ, 3 ಬೌಂಡರಿ) ಹಾಗೂ ಶೆಫಾಲಿ 7.1 ಓವರ್ಗಳಲ್ಲಿ ಮೊದಲ ವಿಕೆಟ್ ಗೆ 64 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದ್ದರು. ಆದರೆ ಈ ಇಬ್ಬರು ಬೇರ್ಪಟ್ಟ ನಂತರ ಡೆಲ್ಲಿ ಕುಸಿತದ ಹಾದಿ ಹಿಡಿಯಿತು. 18.3 ಓವರ್ಗಳಲ್ಲಿ ಕೇವಲ 113 ರನ್ ಗೆ ಆಲೌಟಾಯಿತು.
ಕರ್ನಾಟಕದ ಬೌಲರ್ ಶ್ರೇಯಾಂಕಾ ಪಾಟೀಲ್ 3.3 ಓವರ್ಗಳಲ್ಲಿ 12 ರನ್ ನೀಡಿ 4 ವಿಕೆಟ್ ಗಳನ್ನು ಕಬಳಿಸಿ ಡೆಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣರಾದರು. ಸೋಫಿ ಮೊಲಿನಿಕ್ಸ್(3-20) ಹಾಗೂ ಆಶಾ ಸೋಭಾನ(2-14) ಐದು ವಿಕೆಟ್ ಗಳನ್ನು ಹಂಚಿಕೊಂಡರು.
ವಿಕೆಟ್ ನಷ್ಟವಿಲ್ಲದೆ 64 ರನ್ ಗಳಿಸಿದ್ದ ಡೆಲ್ಲಿ 45 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ದಯನೀಯ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಯಿತು.
ಈ ವರ್ಷದ ಹೆಡ್-ಟು-ಹೆಡ್ ದಾಖಲೆಯಲ್ಲಿ ಡೆಲ್ಲಿ ತಂಡ ಆರ್ಸಿಬಿ ವಿರುದ್ಧ ಆಡಿರುವ ಎರಡೂ ಪಂದ್ಯಗಳನ್ನು ಜಯಿಸಿ ಮೇಲುಗೈ ಸಾಧಿಸಿದೆ. ಪ್ರಸಕ್ತ ಆವೃತ್ತಿಯಲ್ಲಿ ಡೆಲ್ಲಿ ಕ್ರೀಡಾಂಗಣದಲ್ಲಿ ನಡೆದಿರುವ 10 ಪಂದ್ಯಗಳ ಪೈಕಿ ಮೊದಲು ಬ್ಯಾಟ್ ಮಾಡಿದ್ದ ತಂಡ 7 ಬಾರಿ ಜಯ ಸಾಧಿಸಿತ್ತು. ಇಂದಿನ ಪಂದ್ಯದಲ್ಲಿ ಆರ್ಸಿಬಿ ಮೇಲುಗೈ ಸಾಧಿಸಿ ಪ್ರಶಸ್ತಿ ಎತ್ತಿ ಹಿಡಿದಿದೆ.