ವಿಶ್ವಕಪ್ : ಹರಿಣಗಳನ್ನು ಬೇಟೆಯಾಡಿದ ಡಚ್ಚರು!
ಅಚ್ಚರಿಯ ಫಲಿತಾಂಶ ನೀಡಿದ ದಕ್ಷಿಣ ಆಫ್ರಿಕಾ – ನೆದರ್ಲ್ಯಾಂಡ್ಸ್ ಪಂದ್ಯ
PHOTO : circketworldcup.com
ಧರ್ಮಶಾಲ:ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ ಪಂದ್ಯದಲ್ಲಿ ನೆದರ್ಲ್ಯಾಂಡ್ ತಂಡವು ದಕ್ಷಿಣ ಆಫ್ರಿಕಾ ವನ್ನು ಸೋಲಿಸಿ, ವಿಶ್ವಕಪ್ ನ ಮತ್ತೊಂದು ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಯಿತು. ದಕ್ಷಿಣ ಆಫ್ರಿಕಾ 42.5 ಓವರ್ ನಲ್ಲಿ 207 ರನ್ ಗಳಿಸಿ ಆಲೌಟ್ ಆಯಿತು.
ವಿಶ್ವ ಕಪ್ ಟೂರ್ನಿ ಯಲ್ಲಿ ಸತತ 2 ಪಂದ್ಯಗಳನ್ನು ಭರ್ಜರಿ ಯಾಗಿ ಗೆದ್ದು ಉತ್ತಮ ಪ್ರದರ್ಶನ ನೀಡಿ, ಬಲಿಷ್ಠ ತಂಡಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ ವನ್ನು ನೆದರ್ಲ್ಯಾಂಡ್ಸ್ ಸೋಲಿಸಿ ಟೂರ್ನಿಯಲ್ಲಿ ಮೊದಲ ಜಯ ತನ್ನದಾಗಿ ಕೊಂಡಿದೆ.
ನೆದರ್ಲ್ಯಾಂಡ್ ನೀಡಿದ 246 ರನ್ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಅಕ್ಷರಶಃ ಆಘಾತ ಎದುರಿಸಿತು. ತಂಡ 44 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ವರು ಬ್ಯಾಟರ್ ಗಳು ಪೆವಿಲಿಯನ್ ಸೇರಿದರು. ನಾಯಕ ತೆಂಬಾ ಬವುಮ 16 ರನ್ ವಾನ್ ಡರ್ ಮಾರ್ವೆ ಬೌಲಿಂಗ್ ನಲ್ಲಿ ಔಟ್ ಆದರೆ, ಟೂರ್ನಿಯಲ್ಲಿ ಸತತ 2 ಶತಕ ಬಾರಿಸಿದ್ದ ಕ್ವಿಂಟನ್ ಡಿಕಾಕ್ 20 ರನ್ ಗೆ ಕಾಲಿನ್ ಅಕೆರ್ಮಾನ್ ಬೌಲಿಂಗ್ ನಲ್ಲಿ ನಾಯಕ ಸ್ಕಾಟ್ ಎಡ್ವರ್ಡ್ಸ್ ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.
ರಸ್ಸಿ ವಾನ್ ದರ್ ಡುಸ್ಸೆನ್ 4 ರನ್ ಗಳಿಸಿ ಮಾರ್ವೆ ಗೆ ವಿಕೆಟ್ ನೀಡಿದರು. ದಕ್ಷಿಣ ಆಫ್ರಿಕಾ ನಂಬಿಕಸ್ಥ ಬ್ಯಾಟರ್ ಐಡಮ್ ಮಾಕ್ರಂ 1 ರನ್ ಗೆ ಪೌಲ್ ವಾನ್ ಮೀಕರನ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ನೆದರ್ಲ್ಯಾಂಡ್ಸ್ ಅನಾನುಭವಿ ಬೌಲಿಂಗ್ ಪಡೆಯ ಮುಂದೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭ, ಹೆನ್ರಿಕ್ ಕ್ಲಾಸನ್ ಹಾಗೂ ಡೇವಿಡ್ ಮಿಲ್ಲರ್ 46 ರನ್ ಗಳ ಸಣ್ಣ ಜೊತೆಯಾಟ ದ ಪ್ರಯತ್ನ ಮಾಡಿದರು. ಆದರೆ ಒತ್ತಡಕ್ಕೆ ಸಿಲುಕಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಆಕ್ರಮಣಕಾರಿ ಬೌಲಿಂಗ್ ಪ್ರದರ್ಶಿಸಿದ ವಾನ್ ಬೀಕ್, 28 ಗಳಿಸಿ ಬ್ಯಾಟ್ ಮಾಡುತ್ತಿದ್ದ ಹೆನ್ರಿಕ್ ಕ್ಲಾಸನ್ ರನ್ನು ಔಟ್ ಮಾಡುವ ಮೂಲಕ ನೆದರ್ಲ್ಯಾಂಡ್ಸ್ ಗೆ ಮುನ್ನಡೆ ತಂದುಕೊಟ್ಟರು.
ಬಳಿಕ ಒಬ್ಬರ ಹಿಂದೆ ಒಬ್ಬರಂತೆ ಮರ್ಕೋ ಜಾನ್ಸನ್ 9 ಗಳಿದರೆ ಜೆರಾಲ್ಡ್ 22 ಬಾರಿಸಿ ವಿಕೆಟ್ ಒಪ್ಪಿದರು. ದಕ್ಷಿಣ ಆಫ್ರಿಕಾದ ಕಡೇ ಭರವಸೆಯಾಗಿ ಬ್ಯಾಟ್ ಬೀಸುತ್ತಿದ್ದ ಡೇವಿಡ್ ಮಿಲ್ಲರ್ 43 ರನ್ ಗಳಿಸಿರುವಾಗ ಬೌಲ್ ಮಾಡಿದ ವಾನ್ ಬೀಕ್ ಅವರನ್ನು ಔಟ್ ಮಾಡಿ ನೆದರ್ಲ್ಯಾಂಡ್ಸ್ ನ್ನು ಗೆಲುವಿನ ಹತ್ತಿರಕ್ಕೆ ಕೊಂಡೊಯ್ದರು. ಕೊನೆಯ ಕ್ಷಣದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಕೇಶವ್ ಮಹರಾಜ್ 40 ರನ್ ಗಳಿಸಿ 42.5 ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. ಲುಂಗಿ ಎನ್ ಗಿಡಿ 7 ರನ್ ಗಳಿಸಿದರು.
ನೆದರ್ಲ್ಯಾಂಡ್ಸ್ ಪರ ಲೋಗನ್ ವಾನ್ ಬೀಕ್ 3 ವಿಕೆಟ್ ಪಡೆದರು. ಪೌಲ್ ಮೀಕರನ್, ವಾನ್ ಡರ್ ಮರ್ವೇ, ಬಾಸ್ ಡೇ ಲೀಡೇ ತಲಾ 2, ಕಾಲಿನ್ ಅಕೆರ್ಮಾನ್ 1 ವಿಕೆಟ್ ಪಡೆದರು.
ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನೆದರ್ಲ್ಯಾಂಡ್ಸ್ ಗೆ ಬ್ಯಾಟಿಂಗ್ ಆಹ್ವಾನ ನೀಡಿತು. ಆರಂಭಿಕ ಬ್ಯಾಟರ್ ಗಳ ವಿಕೆಟ್ ಪರೇಡ್ ನಡುವೆಯೂ ನಾಯಕ ಸ್ಕಾಟ್ ಎಡ್ವರ್ಡ್ಸ್ ಕೆಚ್ಚೆದೆಯ ಹೊರಾಟ ತಂಡದ ಮೊತ್ತ 245ಕ್ಕೆ ಏರುವಂತೆ ಮಾಡಿತು.
ನೆದರ್ಲ್ಯಾಂಡ್ಸ್ ಆರಂಭಿಕ ಬ್ಯಾಟರ್ ವಿಕ್ರಮಜಿತ್ ಸಿಂಗ್ ಕೇವಲ 2 ರನ್ ಗೆ ಕಾಗಿಸೋ ರಬಡಾ ಗೆ ವಿಕೆಟ್ ಒಪ್ಪಿಸಿದರೆ ಮಾಕ್ಸ್ ಓ'ಡೌಡ್ 18 ರನ್ ಗಳಿಸಿ ಮಾರ್ಕೊ ಜಾನ್ಸನ್ ಬೌಲಿಂಗ್ ನಲ್ಲಿ ಕೀಪರ್ ಕ್ವಿಂಟೆನ್ ಡಿ ಕಾಕ್ ಗೆ ಕ್ಯಾಚ್ ನೀಡಿ ನಿರ್ಗಮಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕಾಲಿನ್ ಆಕೆರ್ಮಾನ್ ರಕ್ಷಣಾತ್ಮಕ ಆಟ ಆಡುವ ಪ್ರಯತ್ನ ಮಾಡಿದರು. ಆದರೆ ಜೆರಾಲ್ಡ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಬಾಸ್ ಡೇ ಲೀಡೆ 2 ರನ್ ಗೆ ರಬಡಾ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯೂ ಬಲೆಗೆ ಬಿದ್ದರು. ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ಆಫ್ರಿಕನ್ ಬೌಲರ್ಸ್ 16 ಓವರ್ ಗಳಲ್ಲಿಯೇ ನೆದರ್ಲ್ಯಾಂಡ್ಸ್ ಪ್ರಮುಖ ನಾಲ್ವರು ಬ್ಯಾಟರ್ ಗಳನ್ನು ಪೆವಿಲಿಯನ್ ಸೇರಿಸಿ ಒತ್ತಡ ಹೇರಿದರು. ಬಳಿಕ ನಿಧಾನವಾಗಿ ಸೈಬ್ರಾಂಡ್ 19 ರನ್ ಗಳಿಸಿ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸುವ ಪ್ರಯತ್ನ ಮಾಡಿದರಾದರೂ ಅನುಭವಿ ಬೌಲಿಂಗ್ ಪಡೆಯ ಮುಂದೆ ಅವರ ಆಟ ಹೆಚ್ಚು ಸಮಯ ನಡೆಯಲಿಲ್ಲ. ನಿರಂತರ ಒಂದಾದ ಮೇಲೆ ಒಂದರಂತೆ ವಿಕೆಟ್ ಗಳ ಪತನ ನೆದರ್ಲ್ಯಾಂಡ್ಸ್ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು. ತೇಜಾ ನಿದಾಮರು ,ವಾನ್ ಬೀಕ್ ಕ್ರಮವಾಗಿ 20, 10 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ನೆದರ್ಲ್ಯಾಂಡ್ಸ್ ಪರ ಏಕಾಂಗಿ ಜವಾಬ್ದಾರಿಯುತ ನಾಯಕನ ಆಟ ಆಡಿದ ಸ್ಕಾಟ್ ಎಡ್ವರ್ಡ್ಸ್ 9 ಬೌಂಡರಿ 1 ಸಿಕ್ಸರ್ ನೆರವಿನಿಂದ 78 ರನ್ ಬಾರಿಸಿ ತಂಡ 200 ರ ಗಡಿ ದಾಟುವಂತೆ ಮಾಡಿ ದಕ್ಷಿಣ ಆಫ್ರಿಕಾ ಗೆ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೊನೆಯಲ್ಲಿ ಬಿರುಸಿನ ಆಟ ಪ್ರದರ್ಶಿಸಿದ ವಾನ್ ಡರ್ ಮಾರ್ವೆ ಉಪಯುಕ್ತ 28 ರನ್ ಗಳಿದರೆ ಹತ್ತನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಆರ್ಯನ್ ದತ್ ಸ್ಫೋಟಕ 23 ರನ್ ಬಾರಿಸಿದರು.
ದಕ್ಷಿಣ ಆಫ್ರಿಕಾ ಪರ ಮಾರ್ಕೊ ಜಾನ್ಸನ್, ಕಗಿಸೋ ರಬಡಾ ಹಾಗೂ ಲುಂಗಿ ಗಿಡಿ ತಲಾ 2 ವಿಕೆಟ್ ಪಡೆದರೆ ಜೆರಾಲ್ಡ್ ಮತ್ತು ಕೇಶವ್ ಮಹಾರಾಜ್ ಒಂದು ವಿಕೆಟ್ ಕಬಳಿಸಿದರು.