ಬಜೆಟ್ ಆಧಿವೇಶನ | ಕರ್ನಾಟಕ ಸರಕಾರದ ‘ಗ್ಯಾರಂಟಿ’ ಯೋಜನೆಗಳು ದೇಶಕ್ಕೆ ಮಾದರಿ : ರಾಜ್ಯಪಾಲ ಗೆಹ್ಲೋಟ್ ಶ್ಲಾಘನೆ
ರಾಜ್ಯ ಸರಕಾರ ಪ್ರಯತ್ನಿಸಿದರೂ ಕೇಂದ್ರದಿಂದ ಬರಪರಿಹಾರ ಬಿಡುಗಡೆಯಾಗಿಲ್ಲ
ಬೆಂಗಳೂರು: ಕರ್ನಾಟಕ ಸರಕಾರದ ‘ಗ್ಯಾರಂಟಿ’ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಆರ್ಥಿಕ ಅಸಮಾನತೆಯಿಂದಾಗಿ ಬಡವರಿಗೆ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಾಂತ್ವನವನ್ನು ಒದಗಿಸಿವೆ. ಶಕ್ತಿ, ಅನ್ನಭಾಗ್ಯ, ಯುವನಿಧಿ, ಗೃಹಲಕ್ಷ್ಮೀ, ಗೃಹಜ್ಯೋತಿ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವರ್ಷದ ಮೊದಲ ಅಧಿವೇಶನದಲ್ಲಿ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ‘ದೇಶದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದಾಗಿ ಬಸವಳಿದ ಜನರಿಗೆ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಾಂತ್ವನ ಒದಗಿಸಿವೆ. ಇವು ಆರ್ಥಿಕವಾಗಿ ಅಶಕ್ತರಾದವರಿಗೆ ಎಷ್ಟೊಂದು ಅಗತ್ಯವಿತ್ತು ಎನ್ನುವುದಕ್ಕೆ ಬೃಹತ್ ಸಂಖ್ಯೆಯಲ್ಲಿ ಹರಿದು ಬಂದ ಅರ್ಜಿಗಳೇ ಸಾಕ್ಷಿ’ ಎಂದು ರಾಜ್ಯಪಾಲ ಥಾವರ್‍ಚಂದ್ ಗೆಹ್ಲೋಟ್, ರಾಜ್ಯ ಸರಕಾರವನ್ನು ಅಭಿನಂದಿಸಿದ್ದಾರೆ.
‘ಈ ಯೋಜನೆಗಳ ಸಮರ್ಪಕ ಅನುಷ್ಠಾನವನ್ನು ಆದ್ಯತೆಯನ್ನಾಗಿ ಪರಿಗಣಿಸಿರುವ ನನ್ನ ಸರಕಾರ ಇದಕ್ಕೊಂದು ಸುಸಜ್ಜಿತ ವ್ಯವಸ್ಥೆಯನ್ನು ರೂಪಿಸಿದೆ. ಆದರೆ, ಆರ್ಥಿಕ ಅಸಮಾನತೆಯಿಂದಾಗಿ ಅಶಕ್ತರಾಗಿ ಉಳಿದಿರುವ ಜನತೆಯ ಬದುಕಿಗೆ ಈ ಗ್ಯಾರಂಟಿಗಳು ಮಾತ್ರ ಸಾಕಾಗುವುದಿಲ್ಲ ಎನ್ನುವ ಅರಿವು ಸರಕಾರಕ್ಕೆ ಇದೆʼ ಎಂದರು.
‘ಸಂಪತ್ತು ಕೆಲವೇ ವ್ಯಕ್ತಿಗಳಲ್ಲಿ ಕೇಂದ್ರೀಕೃತವಾಗುವ ರೀತಿಯ ಅಭಿವೃದ್ಧಿಯನ್ನು ಅಭಿವೃದ್ಧಿ ಎಂದು ಕರೆಯಲು ಸಾಧ್ಯವಿಲ್ಲ. ಅದಕ್ಕಾಗಿ ಅಶಕ್ತರಾಗಿ ಉಳಿದಿರುವ ಜನಸಮೂಹವನ್ನು ಇಡೀ ಆರ್ಥಿಕ ಬೆಳವಣಿಗೆಯಲ್ಲಿ ಭಾಗೀದಾರರನ್ನಾಗಿ ಮಾಡುವ ಅವಶ್ಯಕತೆಯಿದೆ. ಅಭಿವೃದ್ಧಿಯ ಫಲವು ಸಹಜವಾಗಿಯೆ ಎಲ್ಲರಿಗೂ ಲಭಿಸುವ ರೀತಿಯಲ್ಲಿ ಆರ್ಥಿಕ ಅಭಿವೃದ್ಧಿಯನ್ನು ನಿರೂಪಿಸಲು ನನ್ನ ಸರಕಾರ ಮುಂದಾಗಿದೆʼ ಎಂದು ಅವರು ಹೇಳಿದರು.
1.2 ಕೋಟಿ ಕುಟುಂಬಗಳು ಬಡತನ ರೇಖೆಗಿಂತ ಹೊರಗೆ: ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಮತ್ತು ಯುವನಿಧಿ ಎಂಬ ಪಂಚ ಗ್ಯಾರಂಟಿ ಯೋಜನೆಗಳಿಂದ 1.2ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಗಿಂತ ಹೊರಗೆ ಬಂದು ಮಧ್ಯಮ ವರ್ಗದ ಸ್ಥಿತಿಗೆ ಏರುತ್ತಿವೆ. ಸರಕಾರದ ಒಂದು ನಿರ್ಣಯದಿಂದ ರಾಜ್ಯದ 5ಕೋಟಿಗೂ ಹೆಚ್ಚು ಜನರು ಮಧ್ಯಮ ವರ್ಗದ ಸ್ಥಿತಿಗೆ ಏರುವುದು ಜಾಗತಿಕ ದಾಖಲೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಭವಿಷ್ಯದತ್ತ ದೃಷ್ಟಿ ನೆಟ್ಟಿರುವ (ಫ್ಯೂಚರಿಸ್ಟಿಕ್) ಸರಕಾರದ ಎಲ್ಲ ಯೋಜನೆಗಳು ರಾಜ್ಯದ ಸಮಸ್ತ ಜನತೆಯ ಪಾಲಿಗೆ ಸಂತೃಪ್ತಿಯ ಮತ್ತು ನೆಮ್ಮದಿಯ ನಾಳೆಗಳನ್ನು ತರುವ ಉದ್ದೇಶ ಹೊಂದಿವೆ. ನಮ್ಮ ನೀತಿಗಳಲ್ಲಿ ಹೊಸತನವನ್ನು ಅಳವಡಿಸಿಕೊಳ್ಳಲಾಗಿದೆ. ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿ, ಕೈಗಾರಿಕೆ ಮತ್ತು ಸೇವಾ ರಂಗಗಳಲ್ಲಿ ಹೊಸ ಭರವಸೆಗಳನ್ನು ಹುಟ್ಟು ಹಾಕಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಹಾಗೂ ಜೀವನ ಭದ್ರತೆಯನ್ನು ಕಲ್ಪಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಹೊಸ ಶಿಕ್ಷಣ ನೀತಿ: ತಂತ್ರಜ್ಞಾನದ ಹೊಸ ಹೊಸ ಆವಿಷ್ಕಾರಗಳು ಜನಜೀವನದ ಎಲ್ಲ ರಂಗಗಳನ್ನು ವ್ಯಾಪಕವಾಗಿ ಆವರಿಸಿಕೊಳ್ಳುತ್ತಿವೆ ಹಾಗೂ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಈ ಅವಕಾಶಗಳನ್ನು ಬಳಸಿಕೊಂಡು ಉದ್ಯಮಶೀಲತೆಯನ್ನು ರೂಢಿಸಿಕೊಳ್ಳಲು ಮತ್ತು ಉದ್ಯೋಗ ಪಡೆದುಕೊಳ್ಳಲು ನಮ್ಮ ಯುವ ಜನತೆಯನ್ನು ಸನ್ನದ್ಧಗೊಳಿಸುವುದಕ್ಕಾಗಿ ನಾವು ಹೊಸ ಶಿಕ್ಷಣ ನೀತಿಯನ್ನು ರೂಪಿಸುತ್ತಿದ್ದೇವೆ ಎಂದು ರಾಜ್ಯಪಾಲ ತಿಳಿಸಿದರು.
ರಾಜ್ಯ ಶಿಕ್ಷಣ ನೀತಿಯು, ಈಗಾಗಲೇ ರಾಜ್ಯವು ಸಾಧಿಸಿರುವ ಶೈಕ್ಷಣಿಕ ಪ್ರಗತಿಯೊಂದಿಗೆ ಈ ಕಾಲದ ಮತ್ತು ಭವಿಷ್ಯದ ಅಗತ್ಯಗಳಿಗೆ ಪೂರಕವಾಗಿರುವ ಶಿಕ್ಷಣ ನೀಡುವ ಹೊಸ ಸಾಧ್ಯತೆಗಳನ್ನು ತೆರೆದಿಡಲಿದೆ. ಶಿಕ್ಷಣ ರಂಗದಲ್ಲಿ ಇರುವ ಕೊರತೆಗಳನ್ನು ಸರಿಪಡಿಸುವುದರ ಜತೆಗೆ ಅದನ್ನು ಕಾಲಮಾನದ ಅಗತ್ಯಗಳಿಗೆ ಅನುಗುಣವಾಗಿ ಪುನರ್ ರಚಿಸುವ ಅನಿವಾರ್ಯತೆಯನ್ನು ಸರಕಾರ ಮನಗಂಡಿದೆ. ರಾಜ್ಯ ಶಿಕ್ಷಣ ನೀತಿಯು ಈ ನಿಟ್ಟಿನಲ್ಲಿ ದೇಶಕ್ಕೆ ಒಂದು ಹೊಸ ಹಾದಿಯನ್ನು ತೋರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ಸರಕಾರವು ʼಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ʼ ಎಂಬುದನ್ನೂ ಮರೆಯದೆ ʼಈಸ್ ಆಫ್ ಗವರ್ನೆನ್ಸ್ʼ ಎಂಬುದನ್ನು ಮೂಲ ಆಶಯವನ್ನಾಗಿರಿಸಿಕೊಂಡಿದೆ. ಶಕ್ತಿ ಯೋಜನೆ ಪ್ರಾರಂಭವಾದಂದಿನಿಂದ ಇಲ್ಲಿಯವರೆಗೆ 150 ಕೋಟಿಗೂ ಹೆಚ್ಚು ಟ್ರಿಪ್ ಗಳಲ್ಲಿ ಮಹಿಳಾ ಪ್ರಯಾಣಿಕರು ಪ್ರವಾಸ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಕಳೆದ ಸಾಲಿನ ಜುಲೈ ತಿಂಗಳಿನಿಂದ ಜನವರಿ ಅಂತ್ಯಕ್ಕೆ 4595 ಕೋಟಿ ರೂ.ಗಳನ್ನು ಅರ್ಹ ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ ಎಂದು ರಾಜ್ಯಪಾಲ ತಿಳಿಸಿದರು.
ಗೃಹಜ್ಯೋತಿ ಯೋಜನೆಯಡಿ ನಾಡಿನ 1.51 ಕೋಟಿ ಗ್ರಾಹಕರು ಈ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿ ಕೊಂಡಿರುವ 1.17 ಕೋಟಿ ಮಹಿಳಾ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಜನವರಿ ವರೆಗೆ 11,037 ಕೋಟಿ ರೂ. ಗಳನ್ನು ವರ್ಗಾಯಿಸಲಾಗಿದೆ ಥಾವರ್‍ಚಂದ್ ಗೆಹ್ಲೋಟ್ ಹೇಳಿದರು.
ಯುವನಿಧಿ ಯೋಜನೆಯಡಿ 2022-23ನೆ ಸಾಲಿನಲ್ಲಿ ಉತ್ತೀರ್ಣರಾದ ಪದವೀಧರರು ಮತ್ತು ಡಿಪ್ಲೊಮಾ ಹೊಂದಿದವರು 180 ದಿನಗಳು ಪೂರ್ಣಗೊಂಡರೂ ಉದ್ಯೋಗವನ್ನು ಪಡೆಯದೆ ಇದ್ದರೆ ಕ್ರಮವಾಗಿ ಮಾಸಿಕ 3 ಸಾವಿರ ರೂ. ಮತ್ತು 1500 ರೂ.ಗಳ ನಿರುದ್ಯೋಗ ಭತ್ತೆಯನ್ನು ಎರಡು ವರ್ಷದ ಅವಧಿಗೆ ಅಥವಾ ಎರಡು ವರ್ಷದೊಳಗೆ ಉದ್ಯೋಗ ಪಡೆಯುವವರೆಗೆ ಪಾವತಿಸಲು ಸರಕಾರಿ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರದಿಂದ ಈವರೆಗೂ ಪರಿಹಾರ ಬಿಡುಗಡೆಯಾಗಿಲ್ಲ
"ಬರಪೀಡಿತ ತಾಲ್ಲೂಕುಗಳಲ್ಲಿ ತಕ್ಷಣದ ಬರ ಪರಿಹಾರ ಕ್ರಮಗಳನ್ನು ಕೈಗೊಳ್ಳಲು NDRF ನಿಂದ ರೂ.18171.44 ಕೋಟಿ ಆರ್ಥಿಕ ನೆರವು ಕೋರಿ ರಾಜ್ಯ ಸರಕಾರವು ಭಾರತ ಸರಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯಕ್ಕೆ ಮುಂಗಾರಿನ ಬರ ಪರಿಹಾರಕ್ಕೆ ಸಂಬಂಧಿಸಿದ ಮೆಮೊರಾಂಡಂ ಗಳನ್ನು ಸಲ್ಲಿಸಿದೆ. ಆದರೆ ಈವರೆಗೂ ಪರಿಹಾರ ಬಿಡುಗಡೆಯಾಗಿರುವುದಿಲ್ಲ. ಜನರ ಸಂಕಷ್ಟಗಳನ್ನು ಹೋಗಲಾಡಿಸಲು ತುರ್ತಾಗಿ ಬರಪರಿಹಾರವನ್ನು ಬಿಡುಗಡೆ ಮಾಡಿಸಲು ಅಗತ್ಯವಿರುವ ಎಲ್ಲ ಪ್ರಯತ್ನಗಳನ್ನೂ ರಾಜ್ಯ ಸರಕಾರ ಮಾಡುತ್ತಿದೆ" ಎಂದು ಅವರು ಹೇಳಿದರು.
"ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ SDRF ಮಾರ್ಗಸೂಚಿಗಳ ಪ್ರಕಾರ ಸರಕಾರವೇ ಮೊದಲನೇ ಕಂತಾಗಿ ಬೆಳೆ ಹಾನಿ ಪರಿಹಾರವನ್ನು ಅರ್ಹತೆಗೆ ಅನುಗುಣವಾಗಿ 2000 ರೂ. ಗಳವರೆಗೆ ಪರಿಹಾರವನ್ನು 33.40 ಲಕ್ಷ ಬರಪೀಡಿತ ರೈತರುಗಳಿಗೆ 634 ಕೋಟಿ ರೂಗಳಷ್ಟು ಇನ್ಪುಟ್ ಸಬ್ಸಿಡಿಯನ್ನು ಪಾವತಿಸಿದೆ. ಪರಿಹಾರಕ್ಕೆ ಸಂಬಂಧಿಸಿದಂತೆ ನಾವು ಈ ಬಾರಿ ಸಂಪೂರ್ಣ ಪಾರದರ್ಶಕತೆಯನ್ನು ತಂದಿದ್ದೇವೆ. ಹಿಂದಿನ ವರ್ಷಗಳಲ್ಲಿ ನೀಡಿದ ಪರಿಹಾರಗಳಲ್ಲಿ ಮತ್ತು ಇನ್ಪುಟ್ ಸಬ್ಸಿಡಿಗಳಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವುದು ಸರಕಾರದ ಗಮನಕ್ಕೆ ಬಂದಿದೆ" ಎಂದರು.