ಒಂದೇ ರೂಪಾಯಿಯಲ್ಲಿ ಆರೋಗ್ಯ ತಪಾಸಣೆ!
ಮುಂಬೈ, ಮೇ 11: ಮೇಲಿನ ಶೀರ್ಷಿಕೆ ನೋಡಿ ಅಚ್ಚರಿಪಡಬೇಡಿ, ಇದು ಅಚ್ಚರಿಯಾದರೂ ಸತ್ಯ. ಒಂದೇ ರೂಪಾಯಿಯಲ್ಲಿ ಆರೋಗ್ಯ ತಪಾಸಣೆ ಮಾಡುವ ಕ್ಲಿನಿಕ್ವೊಂದು ವಾಣಿಜ್ಯ ನಗರಿ ಮುಂಬೈನ ಘಾಟ್ಕೋಪರ್ ರೈಲ್ವೆ ಸ್ಟೇಶನ್ನಲ್ಲಿ ಹೊಸತಾಗಿ ಆರಂಭವಾಗಿದೆ.
ನಗರದಲ್ಲಿ 24 ಗಂಟೆಗಳು ಕಾರ್ಯಾಚರಿಸುವ ‘1 ರೂಪಾಯಿಯ ಕ್ಲಿನಿಕ್’ವೊಂದು ಘಾಟ್ಕೋಪರ್ನಲ್ಲಿ ಬುಧವಾರ ಆರಂಭವಾಗಿದೆ. ಒಂದೇ ರೂಪಾಯಿಯಲ್ಲಿ 12 ಗಂಟೆಗಳ ಕಾಲ ಒಪಿಡಿ ಸೇವೆಯೂ ಲಭ್ಯವಿದೆ. ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ವೈದ್ಯರು ಮೂರು ಗಂಟೆಗಳ ಪಾಳಿಯಲ್ಲಿ ರೋಗಿಗಳ ಆರೈಕೆ ನೋಡಿಕೊಳ್ಳಲಿದ್ದಾರೆ. ಇನ್ನೂ ಮೂರು ಕ್ಲಿನಿಕ್ಗಳು ಸೆಂಟ್ರಲ್ ರೈಲ್ವೇ ವ್ಯಾಪ್ತಿಯಲ್ಲಿರುವ ದಾದರ್, ಕುರ್ಲಾ ಹಾಗೂ ವಿಕ್ರೋಲಿ ರೈಲ್ವೇ ಸ್ಟೇಶನ್ನಲ್ಲಿ ಶೀಘ್ರವೇ ಆರಂಭವಾಗಲಿದೆ. 15 ರೈಲ್ವೆ ಸ್ಟೇಶನ್ಗಳಿಗೆ ಈ ವ್ಯವಸ್ಥೆಯನ್ನು ವಿಸ್ತರಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಘಾಟ್ಕೋಪರ್ ಸ್ಟೇಶನ್ನಲ್ಲಿ ಕ್ಲಿನಿಕ್ ಆರಂಭವಾದ ಮೊದಲ ದಿನವೇ 60ಕ್ಕೂ ಅಧಿಕ ರೋಗಿಗಳು ಭೇಟಿ ನೀಡಿದ್ದಾರೆ.
ಅರ್ಥರ್ ರೋಡ್ ಜೈಲಿನ ಮಾಜಿ ವೈದ್ಯಕೀಯ ಅಧಿಕಾರಿ ಡಾ.ರಾಹುಲ್ ಘುಲೆ ಅವರ ಕನಸಿನ ಕೂಸು ಈ ಯೋಜನೆಯಾಗಿದೆ. ‘‘ನಗರದ ಪ್ರಮುಖ ಆಸ್ಪತ್ರೆಗಳಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದ ಸಾವಿರಾರು ರೋಗಿಗಳು ಹೋಗುತ್ತಾರೆ. ಇದು ಅವರ ಒತ್ತಡವನ್ನು ಹೆಚ್ಚಿಸುತ್ತದೆ. ರೈಲ್ವೆ ಸ್ಟೇಶನ್ಗಳಲ್ಲಿ ಕ್ಲಿನಿಕ್ ತೆರೆದರೆ ಆಸ್ಪತ್ರೆಗಳ ಕೆಲಸದ ಒತ್ತಡ ಕಡಿಮೆ ಮಾಡಬಹುದು. ರೈಲ್ವೆ ನಿಲ್ದಾಣದಲ್ಲಿ ಅಪಘಾತ ಸಂಭವಿಸಿದಾಗ ತುರ್ತು ಚಿಕಿತ್ಸೆಯನ್ನು ಕ್ಲಿನಿಕ್ನಲ್ಲಿ ನೀಡಲು ಸಾಧ್ಯವಿದೆ. ಕ್ಲಿನಿಕ್ನ್ನು ಐವರು ಎಂಬಿಬಿಎಸ್ ಹಾಗೂ ನಾಲ್ವರು ಎಂಡಿ ವೈದ್ಯರು ನೋಡಿಕೊಳ್ಳುತ್ತಾರೆ. ಲೀಲಾವತಿ, ಅಂಬಾನಿ, ಬಾಂಬೆ ಹಾಗೂ ಕೋಕಿಲಾಬೆನ್ ಆಸ್ಪತ್ರೆಗಳ ತಜ್ಞ್ಷ ವೈದ್ಯರುಗಳು ಕ್ಲಿನಿಕ್ಗೆ ಭೇಟಿ ನೀಡಲಿದ್ದಾರೆ.