ಕೇಂದ್ರ ಸರಕಾರದಿಂದ ಅನ್ನ ಭಾಗ್ಯ ಯೋಜನೆ ತಡೆಯುವ ಷಡ್ಯಂತ್ರ: ವಿನಯ ಕುಮಾರ್ ಸೊರಕೆ
ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗದ ಬಿಜೆಪಿ ಕೇವಲ ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡು ಹಿಂದ್ವುತದ ಹೆಸರು ಹೇಳಿ ಅಧಿಕಾರಿಕ್ಕೆ ಬರುವ ಪ್ರಯತ್ನ ಮಾಡಿದೆ. ಇದೀಗ ಸೋತ ಹತಾಷೆಯಿಂದ ನಮ್ಮ ಸರಕಾರದ ಗ್ಯಾರಂಟಿಗಳ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡುತ್ತಿದೆ. ಅಕ್ರಮ ಮರಳುಗಾರಿಕೆ, ಗಣಿಗಾರಿಕೆ, ಕ್ಲಬ್‌ಗಳು, ಮಟ್ಕಾ ದಂಧೆ, ಮರ ಸಾಗಾಟದಂತಹ ಕ್ರಿಮಿನಲ್ ಚಟುವಟಿಕೆಗಳಲ್ಲಿ ಬಂದ ಹಣವನ್ನು ಬಿಜೆಪಿ ಪಕ್ಷ ಸಂಘಟನೆಗೆ ವಿನಿಯೋಗಿಸುತ್ತಿದೆ. -ವಿನಯ ಕುಮಾರ್ ಸೊರಕೆ, ಮಾಜಿ ಸಚಿವರು
ಉಡುಪಿ: ಕಾಂಗ್ರೆಸ್ ಪಕ್ಷದ ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡುವ ನಿರ್ಧಾರದಿಂದ ಹಿಂದೆ ಸರಿದು ಬಡವರ ಅನ್ನ ಕಿತ್ತುಕೊಳ್ಳಲು ಹೊರಟಿರುವ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಮಂಗಳವಾರ ಉಡುಪಿ ಬ್ರಹ್ಮಗಿರಿ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಭವನದಿಂದ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಕಾರರು ಕೇಂದ್ರ ಸರಕಾರದ ವಿರುದ್ದ ಘೋಷಣೆ ಕೂಗಿದರು. ಬಳಿಕ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕೇಂದ್ರ ಸರಕಾರ ರಾಜ್ಯಕ್ಕೆ ಅಕ್ಕಿ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಇವರಿಗೆ ಲಕ್ಷಾಂತರ ಮೆಟ್ರಿಕ್ ಟನ್ ಅಕ್ಕಿಯನ್ನು ತಾಲಿಬಾನ್ ಸರಕಾರಕ್ಕೆ ನೀಡುವ ಕೇಂದ್ರಕ್ಕೆ ಕರ್ನಾಟಕ ರಾಜ್ಯದ ಬಡವರಿಗೆ ನೀಡುವ ಅಕ್ಕಿ ಇಲ್ಲ. ಇದು ಅನ್ನ ಭಾಗ್ಯ ಯೋಜನೆಯನ್ನು ತಡೆಯುವ ಷಡ್ಯಂತ್ರ ಎಂದು ಆರೋಪಿಸಿದರು.
ಈ ಸಮಸ್ಯೆಯನ್ನು ಪರಿಹರಿಸಬೇಕಾದ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹಿಂದಿನಿಂದ ಕೊಡದಂತೆ ಷಡ್ಯಂತ್ರ ನಡೆಸುತ್ತಿದ್ದಾರೆ. ಈ ಬಿಜೆಪಿ ಯವರು ಒಂದೆಡೆ ಎಲ್ಲ ಐದು ಗ್ಯಾರಂಟಿಗಳನ್ನು ಕೂಡಲೇ ಅನುಷ್ಠಾನಗೊಳಿಸು ವಂತೆ ಒತ್ತಾಯ ಮಾಡುತ್ತಾರೆ. ಇನ್ನೊಂದು ಕಡೆ ಯೋಜನೆಯನ್ನು ಅನುಷ್ಟಾನ ಮಾಡದಂತೆ ಅಡ್ಡಗಾಲು ಹಾಕುತ್ತಿದ್ದಾರೆ. ಈ ಮೂಲಕ ಬಡವರ ಹೊಟ್ಟೆಗೆ ಹೊಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಅವರು ದೂರಿದರು.
ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಮುಖಂಡರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಪ್ರಸಾದ್‌ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ನೀರೆ ಕೃಷ್ಣಶೆಟ್ಟಿ, ದಿನೇಶ್ ಪುತ್ರನ್, ರಾಜು ಪೂಜಾರಿ, ಭಾಸ್ಕರ್ ರಾವ್ ಕಿದಿಯೂರು, ಬಿಪಿನ್‌ಚಂದ್ರ ಪಾಲ್ ನಕ್ರೆ, ಬಿ.ನರಸಿಂಹಮೂರ್ತಿ, ಬಿ.ಕುಶಲ ಶೆಟ್ಟಿ, ಅಣ್ಣಯ್ಯ ಸೇರಿಗಾರ್, ರಮೇಶ್ ಕಾಂಚನ್, ಮದನ್ ಕುಮಾರ್, ಹರಿಪ್ರಸಾದ್ ಶೆಟ್ಟಿ, ರಾಮಚಂದ್ರ ಬಾಯರಿ, ನವೀನ್‌ಚಂದ್ರ ಸುವರ್ಣ, ಶಂಕರ್ ಕುಂದರ್, ದಿನಕರ್ ಹೇರೂರು, ಮುರಳಿ ಶೆಟ್ಟಿ, ಹರೀಶ್ ಕಿಣಿ, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೆರ, ಶಬ್ಬೀರ್ ಅಹ್ಮದ್, ಜಯ ಕುಮಾರ್, ಇಸ್ಮಾಯಿಲ್ ಅತ್ರಾಡಿ, ಕೃಷ್ಣ ಮೂರ್ತಿ ಆಚಾರ್ಯ, ಬಾಲಕೃಷ್ಣ ಪೂಜಾರಿ, ಗೀತಾ ವಾಗ್ಳೆ, ಡಾ.ಸುನಿತಾ ಶೆಟ್ಟಿ, ಮೀನಾಕ್ಷಿ ಮಾಧವ ಬನ್ನಂಜೆ, ಮಲ್ಲಿಕಾ ಪೂಜಾರ್ತಿ, ಮಹಾಬಲ ಕುಂದರ್, ಲೂಯಿಸ್ ಲೋಬೋ ಉಪಸ್ಥಿತರಿದ್ದರು.