ತಾಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ತಜ್ಞರ ನೇಮಕ : ಸಚಿವ ದಿನೇಶ್ ಗುಂಡೂರಾವ್
ಕೊಳ್ಳೇಗಾಲ: ರಾಜ್ಯದ ತಾಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ತಜ್ಞರನ್ನು ನೇಮಕ ಮಾಡಿಕೊಳ್ಳಲು ಸರಕಾರ ತೀರ್ಮಾನ ಕೈಗೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಪಟ್ಟಣದ ಎಂಜಿಎಸ್‌ವಿ ಕಾಲೇಜು ಮೈದಾನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕು ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ತಜ್ಞರನ್ನು ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಖಾಲಿ ಇರುವ ʼರೇಡಿಯಾಲಜಿಸ್ಟ್ʼ ಸೇರಿದಂತೆ ಇತರೆ ಅಗತ್ಯ ಇರುವ ತಜ್ಞರನ್ನು ನೇಮಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕ್ರಮವಹಿಸಬೇಕು ಎಂದು ತಿಳಿಸಿದರು.
ಅಲ್ಲದೇ ರಾಜ್ಯದ 42 ಹೊಸ ತಾಲೂಕುಗಳಿಗೆ ಡಯಾಲಿಸಿಸ್ ಕೇಂದ್ರವನ್ನು ತೆರೆಯಲಾಗುವುದು. ಹನೂರು ತಾಲೂಕಿನ ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಿರುವ ವೈದ್ಯರು, ಸಲಕರಣೆ ನೀಡುವ ಜೊತೆಗೆ ಡಯಾಲಿಸಿಸ್ ಕೇಂದ್ರ ತೆರೆಯಲು ಕ್ರಮವಹಿಸಲಾಗುವುದು ಎಂದರು.
ರಾಜ್ಯದ ಎಲ್ಲೆಡೆ ಆರೋಗ್ಯ ಮೇಳ ಮಾಡಲು ಯೋಜನೆ ರೂಪಿಸಲಾಗುವುದು
ಈ ರೀತಿಯ ಆರೋಗ್ಯ ಮೇಳವನ್ನು ಹಿಂದಿನ ಸರಕಾರದಲ್ಲಿ ಮಾಡಿರಲಿಲ್ಲ. ಆರೋಗ್ಯ ವ್ಯವಸ್ಥೆಯನ್ನು ಜನರ ಬಳಿ ತಲುಪಿಸುವುದು ಬಹಳ ಮುಖ್ಯ. ತಜ್ಞ ವೈದ್ಯರು, ಉಪಕರಣಗಳು, ಟೆಕ್ನಿಷಿಯನ್‌ಗಳ ಲಭ್ಯತೆಯನ್ನು ದೂರದ ತಾಲೂಕುಗಳ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದೆ. ಮೊದಲೇ ರೋಗ ಪತ್ತೆಯಾದರೆ ಅದನ್ನು ಗುಣಪಡಿಸಲು ಸುಲಭವಾಗುತ್ತದೆ. ತಡವಾದರೆ ಕಷ್ಟವಾಗುತ್ತದೆ. ಜೀವಗಳನ್ನು ಉಳಿಸಲು ಇಂತಹ ಮೇಳಗಳು ಪ್ರಯೋಜನವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಗ್ರಾಮಗಳು, ಮನೆ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡಲು ಯೋಜನೆ ರೂಪಿಸಲಾಗುವುದು. ಪ್ರಸ್ತುತ ದಿನಗಳಲ್ಲಿ ದಿನೇ ದಿನೇ ಕಾಯಿಲೆಗಳು ಹೆಚ್ಚಾಗುತ್ತಿದ್ದು ಸರಕಾರದ ಮಟ್ಟದಲ್ಲಿಯೇ ಇಂತಹ ಮೇಳಗಳನ್ನುಆಯೋಜಿಸುವುದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಿಗೆ ರೋಗಿಗಳು ಬಂದರೆ ಔಷಧ ಇಲ್ಲ ಅಂತ ವೈದ್ಯರು ಹೇಳಬಾರದು. ಎಲ್ಲ ಔಷಧಗಳು ಆಸ್ಪತ್ರೆಗಳಲ್ಲಿ ಸಿಗಬೇಕು. ಚೀಟಿ ಬರೆದು ಬೇರೆ ಕಡೆ ತೆಗೆದುಕೊಂಡು ಬರುವಂತೆ ಹೇಳುವ ಸ್ಥಿತಿ ಬರಬಾರದು. ತಾಲೂಕು ಆಸ್ಪತ್ರೆ ಬಳಿ ಫಾರ್ಮಸಿ ಇರಬಾರದು. ಆ ರೀತಿಯ ವ್ಯವಸ್ಥೆ ಆಸ್ಪತ್ರೆಗಳಲ್ಲಿ ಇರಬೇಕು ಎಂದು ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮಾತನಾಡಿ, ಬೃಹತ್ ಆರೋಗ್ಯ ಮೇಳವು ಗ್ರಾಮೀಣ ಪ್ರದೇಶದ ಜನರಿಗೆ ವಿನೂತನ ಕಾರ್ಯಕ್ರಮವಾಗಿದ್ದು, ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು. ಇಲ್ಲಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಎಲ್ಲ ತಜ್ಞ ವೈದ್ಯರುಗಳಿದ್ದು, ತಪಾಸಣೆಗೆ ಬಂದಿರುವ ಸಾರ್ವಜನಿಕರು ತಮಗೆ ಬೇಕಾದ ಚಿಕಿತ್ಸೆಯನ್ನು ಪಡೆಯಬೇಕು. ಆರೋಗ್ಯ ಮೇಳಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ನಡೆದರೆ ಉತ್ತಮ. ಇದರಿಂದ ಇಲ್ಲಿನ ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಬಡಜನರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಆರೋಗ್ಯ ಕಾರ್ಯಕ್ರಮದಲ್ಲಿ ಶಾಸಕರಾದ ಎಚ್.ಎಸ್.ಗಣೇಶ್ ಪ್ರಸಾದ್, ಎಂ.ಆರ್.ಮಂಜುನಾಥ್, ಆರೋಗ್ಯ ಇಲಾಖೆಯ ಆಯುಕ್ತ ರಣ್‌ದೀಪ್, ಎನ್‌ಎಚ್‌ಎಂ ಎಂಡಿ ನವೀನ್ ಭಟ್, ನಿರ್ದೇಶಕಿ ಪುಷ್ಪಲತಾ, ಮಾಜಿ ಸಂಸದ ಎಂ.ಶಿವಣ್ಣ, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಡಿಎಚ್ ಒ ಡಾ.ಚಿದಂಬರ, ಸಿಮ್ಸ್ ಡೀನ್ ಡಾ.ಮಂಜುನಾಥ್ ಡಾ .ರಾಜಶೇಖರ್,ಡಾ ಗೋಪಾಲ್, ಇನ್ನು ಹಲವಾರು ವೈದ್ಯರು ಸೇರಿದಂತೆ ಇತರರಿದ್ದರು.