ಮತಗಟ್ಟೆ ಧ್ವಂಸ ಪ್ರಕರಣ | ಚಾಮರಾಜನಗರದ ಒಂದು ಮತಗಟ್ಟೆಗೆ ಎ.29ರಂದು ಮರುಮತದಾನ
ಬೆಂಗಳೂರು : ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದ ಇಂಡಿಗನತ್ತ ಗ್ರಾಮದ ಮತಗಟ್ಟೆಯಲ್ಲಿ ಮತದಾನದ ವೇಳೆ ಗಲಾಟೆಯಿಂದಾಗಿ ಆ ಮತಗಟ್ಟೆಯಲ್ಲಿ ಎ.29ರಂದು ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ ನೀಡಿದೆ.
ಮತಗಟ್ಟೆಯ ಬೂತ್ ನಂಬರ್-146ರಲ್ಲಿ ಎ.29ರ ಸೋಮವಾರ ಬೆಳಗ್ಗೆ 7ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ಮರು ಮತದಾನ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎ.26ರಂದು ನಡೆದ ಚುನಾವಣೆ ವೇಳೆ ಮತಗಟ್ಟೆ ಬಳಿ ಉಂಟಾದ ಗಲಭೆಯಲ್ಲಿ ಇಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ವನ್ನು ಧ್ವಂಸಗೊಳಿಸಲಾಗಿತ್ತು.
ಮತದಾನ ಮಾಡುವ ವಿಚಾರಕ್ಕೆ ಸಂಬಂಧಿಸಿ ಅಧಿಕಾರಿಗಳು-ಗ್ರಾಮಸ್ಥರ ನಡುವೆ ಗಲಾಟೆಯಾಗಿತ್ತು. ಮೂಲಸೌಕರ್ಯ ಒದಗಿಸುವವರೆಗೆ ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಅಧಿಕಾರಿಗಳು ಮನವೊಲಿಸಿ ಮತದಾನಕ್ಕೆ ಕರೆತಂದಿದ್ದರು. ಇದರಿಂದ ರೊಚ್ಚಿಗೆದ್ದ ಇನ್ನಿತರ ಗ್ರಾಮಸ್ಥರು ಮತಕೇಂದ್ರದ ಮೇಲೆ ದಾಳಿ ಮಾಡಿದ್ದರು.
ಹನೂರು ತಾಲೂಕಿನ ಇಂಡಿಗನತ್ತ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಯಾರೊಬ್ಬರೂ ಮತದಾನಕ್ಕೆ ಬಾರದೆ ಇರುವುದರಿಂದ ಶೂನ್ಯ ಮತದಾನವಾಗುವ ಆತಂಕ ಅಧಿಕಾರಿಗಳದ್ದಾಗಿತ್ತು. ಹೀಗಾಗಿ ಅಧಿಕಾರಿಗಳು ಹಾಡಿ ಜನರನ್ನು ಮನವೊಲಿಸಿ ಕರೆತಂದು ಮತದಾನ ಮಾಡಿಸಲು ಮುಂದಾಗಿದ್ದರು.
ಹೀಗಾಗಿ ರೊಚ್ಚಿಗೆದ್ದ ಗ್ರಾಮಸ್ಥರು ಇಂಡಿಗನತ್ತ ಗ್ರಾಮದ ಮತಗಟ್ಟೆಯನ್ನು ಸುತ್ತುವರಿದಿದ್ದು, ಮೂಲಸೌಕರ್ಯ ಕಲ್ಪಿಸುವವರೆಗೆ ಮತದಾನ ಮಾಡಬೇಡಿ ಆಗ್ರಹಿಸಿದ್ದರು. ಈ ವೇಳೆ, ಜನರನ್ನು ಚದುರಿಸಲು ಪೊಲೀಸರು ಲಘುಲಾಠಿ ಚಾರ್ಜ್ ಮಾಡಿದ್ದರು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮತಗಟ್ಟೆ ಮೇಲೆ ದಾಳಿ ಮಾಡಿ ಮೇಜು-ಕುರ್ಚಿ ಸಹಿತ ಇವಿಎಂ ಧ್ವಂಸ ಮಾಡಿದ್ದರು.