ಚಾಮರಾಜನಗರ | ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಹತ್ಯೆಗೈದ ಪತ್ನಿ
ನಾಪತ್ತೆ ಪ್ರಕರಣ ಭೇದಿಸಿದ ಪೊಲೀಸರು

ಚಾಮರಾಜನಗರ : ತಾಲೂಕಿನ ಕುದೇರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ.
ಚಾಮರಾಜನಗರ ತಾಲೂಕಿನ ಜನ್ನೂರು ಗ್ರಾಮದ ರಮೇಶ್ (45) ಕೊಲೆಯಾದ ವ್ಯಕ್ತಿ. ಅವರ ಪತ್ನಿ ಗೀತಾ ಹಾಗೂ ಗುರುಪಾದಸ್ವಾಮಿ ಬಂಧಿತರು. ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಗೀತಾ ಅವರು ಜ.21ರಂದು ಕುದೇರು ಠಾಣೆಗೆ ಬಂದು ತನ್ನ ಪತಿ ರಮೇಶ್ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಜ.14ರಂದು ಪತಿ ರಾತ್ರಿ ಹೊರ ಹೋಗಿದ್ದು ವಾಪಸ್ ಬಂದಿಲ್ಲ ಎಂದು ದೂರು ನೀಡಿದ್ದರು.
ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಗ್ರಾಮದವರ ಮಾಹಿತಿ ಆಧರಿಸಿ ಗೀತಾಳನ್ನು ವಿಚಾರಣೆ ಮಾಡಿದ ಪೊಲೀಸರು ಹತ್ಯೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಮೇಶ್ ಹಾಗೂ ಗೀತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಗೀತಾ ತನ್ನ ಪ್ರಿಯಕರ ಗುರುಪಾದಸ್ವಾಮಿ ಜೊತೆ ಸೇರಿ ರಮೇಶ್‌ನನ್ನು ಕೊಲೆ ಮಾಡಿ ಆ ಬಳಿಕ ಮೃತದೇಹವನ್ನು ಕುಪ್ಪೆಗಾಲ ಬಳಿಯ ಕಪಿಲ ನದಿಯಲ್ಲಿ ಬೀಸಾಡಿ ಬಂದಿದ್ದಾರೆ. ಬಳಿಕ ಯಾರಿಗೂ ಅನುಮಾನಬರಬಾರದೆಂದು ನಾಪತ್ತೆ ದೂರು ನೀಡಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಗುರುಪಾದಸ್ವಾಮಿಗೂ ನನಗೂ ಅಕ್ರಮ ಸಂಬಂಧವಿದ್ದು, ಇಬ್ಬರು ಸೇರಿ ಹತ್ಯೆ ಮಾಡಿ ಕಪಿಲ ನದಿಗೆ ಬೀಸಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ಆರೋಪಿಗಳನ್ನು ಕುಪ್ಪೆಗಾಲ ಬಳಿಯ ಕಪಿಲ ನದಿಗೆ ಕರೆದೊಯ್ದು ಮಾಹಿತಿ ಪಡೆದುಕೊಂಡು ಬಳಿಕ ನದಿಯಿಂದ ಮೃತದೇಹವನ್ನು ಹೊರ ತೆಗೆದಿದ್ದು ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಒಪ್ಪಿಸಲಾಗಿದೆ. ಸ್ಥಳಕ್ಕೆ ಎಸ್ಪಿ ಡಾ.ಕವಿತಾ ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಕುದೇರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.