ಚಾಮರಾಜನಗರ : ಲಂಚ ಸ್ವೀಕರಿಸುವ ವೇಳೆ ವಲಯ ಅರಣ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಚಾಮರಾಜನಗರ : ಕೆರೆ ಅಭಿವೃದ್ದಿ ಕಾಮಗಾರಿ ಸಂಬಂಧ ಲಂಚ ಸ್ವೀಕರಿಸುವಾಗ ವಲಯ ಅರಣ್ಯಾಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಹನೂರು ತಾಲ್ಲೂಕಿನ ಕೌದಳ್ಳಿಯಲ್ಲಿ ನಡೆದಿದೆ.
ಕಾಂತರಾಜ್ ಚೌಹಾಣ್ ಲೋಕಾಯುಕ್ತರ ದಾಳಿಗೆ ಸಿಕ್ಕಿ ಬಿದ್ದಿರುವ ಅಧಿಕಾರಿ. ಹನೂರು ತಾಲ್ಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಜೋಸೆಫ್ ಅನ್ಬಳಗನ್ ರವರು ಮಹತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನಾಲ್ ರೋಡ್ ಅರಣ್ಯ ವ್ಯಾಪ್ತಿಯಲ್ಲಿ ಮೋರನೂರು ಕೆರೆ ಅಭಿವೃದ್ದಿ ಪಡಿಸಲು ಅನುಮತಿ ನೀಡುವಂತೆ ವಲಯ ಅರಣ್ಯಾಧಿಕಾರಿ ಕಾಂತರಾಜ್ ರವರಿಗೆ ಮನವಿ ಮಾಡಿದ್ದರು.
ಕೆರೆ ಅಭಿವೃದ್ದಿಗೆ ಅನುಮತಿ ನೀಡಲು 20 ಸಾವಿರ ರೂಪಾಯಿ ಲಂಚಕ್ಕೆ ವಲಯ ಅರಣ್ಯಾಧಿಕಾರಿ ಕಾಂತರಾಜು ಚೌಹಾಣ್ ಒತ್ತಾಯಿಸಿದ್ದರಿಂದ ಬೇಸತ್ತ ಗ್ರಾಮ ಪಂಚಾಯ್ತಿ ಸದಸ್ಯ ಜೋಸೆಫ್ ಅನ್ಬಳಗನ್ ಲೋಕಾಯುಕ್ತ ಅಧಿಕಾರಿಗಳ ಮೊರೆ ಹೋದರು.
ದೂರಿನನ್ವಯ ಲೋಕಾಯುಕ್ತ ಡಿವೈಎಸ್ಪಿ ಮ್ಯಾಥ್ಯೂ ಥಾಮಸ್ ರವರು ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಹಣ ಮತ್ತು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.