ಚಾಮರಾಜನಗರ: ಇಂಡಿಗನತ್ತ ಗ್ರಾಮದಲ್ಲಿ ಮರು ಮತದಾನ ಆರಂಭ
ಚಾಮರಾಜನಗರ : ಕರ್ನಾಟಕ ತಮಿಳುನಾಡು ಗಡಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯ್ತಿ ಪರಿಮಿತಿಯ ಇಂಡಿಗನತ್ತ, ಮೆಂದಾರೆ ಮತಗಟ್ಟೆಯಲ್ಲಿ ಮರು ಮತದಾನ ಆರಂಭವಾಗಿದ್ದು, ಮತದಾರರಿಗಾಗಿ ಮತಗಟ್ಟೆ ಸಿಬ್ಬಂದಿಗಳು ಕಾಯುತ್ತಿದ್ದಾರೆ.
ಏಪ್ರಿಲ್ 26 ರಂದು ನಡೆದ ಮತದಾನದಂದು ಗ್ರಾಮಸ್ಥರು ಮತ ಬಹಿಷ್ಕರಿಸಿದ ಹಿನ್ನಲೆಯಲ್ಲಿ ನಡೆದ ದುರ್ಘಟನೆಯಿಂದ ಮತಗಟ್ಟೆ ಧ್ವಂಸ ಮಾಡಲಾಗಿತ್ತು. ಇದರ ಬೆನ್ನಲ್ಲೇ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಚುನಾವಣಾಧಿಕಾರಿಗಳು ಮತ್ತು ತಹಸೀಲ್ದಾರ್ ರವರು ಗ್ರಾಮಸ್ಥರ ಮೇಲೆ ಪ್ರಕರಣ ದಾಖಲಿಸಿದ್ದರು. ಇದರ ನಡುವೆ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಪ್ರತ್ಯೇಕ ದೂರು ದಾಖಲಿಸಿದ್ದಾರೆ.
ಇಂಡಿಗನತ್ತ ಮತ್ತು ಮೆಂದಾರೆ ಘಟನೆಯ ಬಗ್ಗೆ ಚುನಾವಣಾ ಆಯೋಗ ಮಾಹಿತಿ ಕಲೆ ಹಾಕಿ ಸೋಮವಾರ ಮರು ಮತದಾನಕ್ಕೆ ನಿರ್ದೇಶನ ನೀಡಿದೆ. ಅದರಂತೆ ಸೋಮವಾರ ಇಂಡಿಗನತ್ತ ಸರ್ಕಾರಿ ಶಾಲೆಯಲ್ಲಿ ಮತದಾನಕ್ಕೆ ಪೊಲೀಸ್ ಸರ್ಪಗಾವಲಲ್ಲಿ ಸಿದ್ದತೆ ಮಾಡಿಕೊಂಡಿದ್ದು, ಎಲ್ಲಾ ಮತಗಟ್ಟೆ ಸಿಬ್ಬಂದಿಗಳನ್ನು ಬದಲಾಯಿಸಲಾಗಿದೆ. ಸಹಾಯಕ ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ಅವರು ಮತಗಟ್ಟೆಯಲ್ಲಿ ಕುಳಿತುಕೊಂಡಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಸುಮಾರು 150 ಖಾಕಿ ಪಡೆಯನ್ನು ನಿಯೋಜನೆ ಮಾಡಿಕೊಂಡಿದ್ದು, ಮತಗಟ್ಟೆಯಲ್ಲಿ ಪ್ರತಿ ಕ್ಷಣದ ಬಗ್ಗೆ ವೀಡಿಯೋ ಚಿತ್ರೀಕರಣಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ.
ಅಧಿಕಾರಿಗಳು ಇಂಡಿಗನತ್ತ, ಮೆಂದಾರೆ ಗ್ರಾಮಸ್ಥರಲ್ಲಿ ಮತ ಚಲಾಯಿಸಲು ಮನವೊಲಿಕೆ ಮಾಡಿದ್ದಾರೆ. ಆದರೆ ಇಂಡಿನಗನತ್ತ ಗ್ರಾಮದಲ್ಲಿ ಗಂಡಸರು ಹೆಚ್ಚಾಗಿ ಇಲ್ಲದೆ ಕೆಲ ಮಹಿಳೆಯರು ಮಾತ್ರ ಮನೆಯಲ್ಲಿದ್ದು , ಅವರೆಲ್ಲರೂ ಮತ ಚಲಾಯಿಸಲು ಬರುತ್ತೇವೆ ಎಂದು ಹೇಳಿದ್ದಾರೆ .ಮೆಂದಾರೆ ಗ್ರಾಮಸ್ಥರು ಮತಚಲಾಯಿಸಲು ಬಯಸಿದ್ದು, ಮತ ಚಲಾವಣೆಗೆ ಮುಂದಾಗುವ ಸಾಧ್ಯತೆ ಇದೆ.
ಇಂಡಿಗನತ್ತ ಮೆಂದಾರೆ ಮತಗಟ್ಟೆಯಲ್ಲಿ ಮತದಾನದ ಪ್ರಮಾಣ ನಿರಾಸದಾಯಕವಾಗಿದ್ದು, ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.