ಚಾಮರಾಜನಗರ: ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಕಡವೆ ಬಲಿ; ಓರ್ವನ ಬಂಧನ
ಚಾಮರಾಜನಗರ: ಜಿಲ್ಲೆಯ ಬಿಳಿಗಿರಿಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ ಯಳಂದೂರು ವನ್ಯಜೀವಿ ವಲಯದ ಮದ್ದೂರು ಗ್ರಾಮ ದೇತಾಳಕಟ್ಟೆ ಗಸ್ತು ವ್ಯಾಪ್ತಿಯಲ್ಲಿ ಜಮೀನಿಗೆ ಅಕ್ರಮವಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಹೆಣ್ಣು ಕಡವೆಯೊಂದು ಮೃತಪಟ್ಟಿದೆ.
ಅರಣ್ಯ ಸಿಬ್ಬಂದಿ ಗಸ್ತು ಮಾಡುವ ವೇಳೆ ಯಳಂದೂರು ವನ್ಯಜೀವಿ ವಲಯದ ಮದ್ದೂರು ಗ್ರಾಮ ದೇತಾಳಕಟ್ಟೆ ಗಸ್ತು ವ್ಯಾಪ್ತಿಯಲ್ಲಿರುವ ಮೋಹನ್ ಬಾಬು ಎಂಬವರ ಜಮೀನಿಗೆ ಅಳವಡಿಸಿರುವ ವಿದ್ಯುತ್ ತಂತಿ ಬೇಲಿ ಸ್ಪರ್ಶದಿಂದ ಕಡವೆ ಮೃತಪಟ್ಟಿರುವುದು ತಿಳಿದು ಬಂದಿದೆ.
ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯಾಧಿಕಾರಿ ದೀಪ್ ಜೆ. ಕಾಂಟ್ರಾಕ್ಟರ್ ಅವರ ಮಾರ್ಗದರ್ಶನದಲ್ಲಿ ಘಟನೆಗೆ ಕಾರಣರಾದ ಜಮೀನು ಮಾಲೀಕರ ವಿರುದ್ಧ ಯಳಂದೂರು ವಲಯ ಅರಣ್ಯಾಧಿಕಾರಿಗಳು ಪ್ರಕರಣವನ್ನು ದಾಖಲಿಸಿ ಪವನ್ ಎನ್ನುವ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಪ್ರಕರಣದ ಮತ್ತೊಬ್ಬ ಆರೋಪಿ ಜಮೀನು ಮಾಲೀಕ ಮೋಹನ್ ಬಾಬು ಪರಾರಿಯಾಗಿದ್ದಾನೆ. ತಲೆ ಮರೆಸಿಕೊಂಡಿರುವ ಮೋಹನ್ ಬಾಬು ಬಂಧನಕ್ಕೆ ಅರಣ್ಯ ಸಿಬ್ಬಂದಿ ಬಲೆ ಬೀಸಿದ್ದಾರೆ.