ಪುನೀತ್ ಮೃತಪಟ್ಟ ಸುದ್ದಿ ಸೋದರತ್ತೆಗೆ ಇನ್ನೂ ತಿಳಿದಿಲ್ಲ: ವೀಡಿಯೊ ವೈರಲ್

ಚಾಮರಾಜನಗರ: ಡಾ.ಪುನೀತ್ ರಾಜ್‌ಕುಮಾರ್ ಅಗಲಿ ಮೂರು ವರ್ಷಗಳಾದರೂ ಅವರ ಸಾವಿನ ಸುದ್ದಿ ಇನ್ನೂ ಅವರ ಸೋದರತ್ತೆಗೆ ತಿಳಿದಿಲ್ಲ ಎನ್ನಲಾಗಿದೆ. ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿ ತಾಲೂಕಿನ ದೊಡ್ಡಗಾಜನೂರಿನಲ್ಲಿರುವ ಡಾ.ರಾಜ್‌ಕುಮಾರ್ ಅವರ ತಂಗಿ ನಾಗಮ್ಮ ಅವರಿಗೆ ಪುನೀತ್ ರಾಜ್‌ಕುಮಾರ್ ಎಂದರೆ ಬಲು ಪ್ರೀತಿ.
ಗಾಜನೂರಿಗೆ ಪುನೀತ್ ರಾಜ್ ಕುಮಾರ್ ಭೇಟಿ ನೀಡದಾಗಲೆಲ್ಲಾ ಸೋದರತ್ತೆ ಬಳಿಯೇ ಹೆಚ್ಚಾಗಿ ಕಾಲ ಕಳೆಯುತ್ತಿದ್ದರು ಎನ್ನಲಾಗಿದೆ.
ಡಾ. ಪುನೀತ್ ರಾಜ್ ಕುಮಾರ್ ಹೃದಯಘಾತದಿಂದ ಮೃತಪಟ್ಟಾಗ ಇಡೀ ಜಗತ್ತಿಗೆ ಅವರ ಅಕಾಲಿಕ ನಿಧನದ ವಿಷಯ ತಿಳಿದು ಕಂಬನಿ ಮಿಡಿಯಿತು. ಆದರೆ ನಾಗಮ್ಮ ಅವರಿಗೆ ಇಂದಿಗೂ ಕೂಡ ಪುನೀತ್ ರಾಜ್ ಕುಮಾರ್ ಅವರ ಸಾವಿನ ಸುದ್ದಿಯನ್ನು ಡಾ.ರಾಜ್ ಕುಟುಂಬದವರು ತಿಳಿಸಿಲ್ಲ ಎನ್ನಲಾಗಿದೆ.
ಮಾ.17ರಂದು ಪುನೀತ್ ರಾಜ್‌ಕುಮಾರ್‌ರವರ 50ನೇ ಜನ್ಮದಿನದಂದು ಸೋದರತ್ತೆ ನಾಗಮ್ಮ ಅವರು ತಮ್ಮ ಪ್ರೀತಿಯ ಅಪ್ಪುಗೆ 50 ವರ್ಷವಾಗಿದೆ ಅನ್ನೋ ವಿಷಯ ಅಚ್ಚರಿಯಾಗಿ ಕೇಳಿ, ಗಾಜನೂರಿಗೆ ಬಂದು ತನ್ನನ್ನು ನೋಡಿಕೊಂಡು ಹೋಗುವಂತೆ ಕೈ ಮುಗಿದು ಕೇಳಿಕೊಂಡ ವೀಡಿಯೋ ಇದೀಗ ಸಖತ್ ಆಗಿ ವೈರಲ್ ಆಗುತ್ತಿದೆ.