ಸಿಎಂ ಸಿದ್ದರಾಮಯ್ಯ ಅವರನ್ನು ಶ್ಲಾಘಿಸಿದ ಜೆಡಿಎಸ್ ಶಾಸಕ ಎಂ.ಆರ್.ಮಂಜುನಾಥ್
ಚಾಮರಾಜನಗರ : ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮದಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಹನೂರು ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಆರ್.ಮಂಜುನಾಥ್ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಹಾಡಿ ಹೊಗಳಿದ ಘಟನೆ ನಡೆದಿದೆ.
ಪ್ರಸ್ತುತ ರಾಜಕಾರಣದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ದ ನಿತ್ಯ ದೂರುತ್ತಿರುವ ಸನ್ನಿವೇಶದಲ್ಲಿ ಶನಿವಾರ ನಡೆದ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕ ಎಂ.ಆರ್. ಮಂಜುನಾಥ್ ಮುಖ್ಯಮಂತ್ರಿಗಳನ್ನು ಶ್ಲಾಘಿಸಿದ ಪ್ರಸಂಗ ನಡೆದಿದೆ.
"ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗ್ಯಗಳ ಹರಿಕಾರ ಎಂದೇ ಪ್ರಸಿದ್ದರಾಗಿದ್ದು, ಎಲ್ಲ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಸಿದ್ದರಾಮಯ್ಯ ಆದ್ಯತೆ ನೀಡಿ, ಮಕ್ಕಳ ಪೌಷ್ಠಿಕತೆಯ ಬಗ್ಗೆಯೂ ಯೋಚನೆ ಮಾಡುತ್ತಾರೆ, ಸರಕಾರಿ ಶಾಲೆಯಲ್ಲಿ ಓದಿ ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಮುಖ್ಯಮಂತ್ರಿಯವರಿಗೆ ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಬವಣೆ ಚೆನ್ನಾಗಿ ಗೊತ್ತು. ಅವರ ಸಮಗ್ರ ಬೆಳವಣಿಗೆಗೆ ಸಿದ್ದರಾಮಯ್ಯ ತೆಗೆದುಕೊಂಡಿರುವ ನಿರ್ಣಯಗಳು ಶ್ಲಾಘನೀಯ" ಎಂದು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.