ಕರ್ನಾಟಕ ಬಂದ್ ಗೆ ಚಾಮರಾಜನಗರದಲ್ಲಿ ಮಿಶ್ರ ಪ್ರತಿಕ್ರಿಯೆ

ಚಾಮರಾಜನಗರ : ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಮರಾಠಿಗರರು ನಡೆಸುವ ದೌರ್ಜನ್ಯ, ದಬ್ಬಾಳಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ಗೆ ಚಾಮರಾಜನಗರ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ದೊರೆಯುತ್ತಿದೆ.
ಕೆಎಸ್ಸಾರ್ಟಿಸಿ ಬಸ್ ಗಳು ಎಂದಿನಂತೆ ಸಂಚಾರ ಮಾಡುತ್ತಿದ್ದವು, ಅಂಗಡಿ ಮುಂಗಟ್ಟುಗಳು ಬೆರಳೆಣಿಕೆಯಷ್ಟು ಬಂದ್ ಆಗಿದ್ದರೆ, ಬಹುತೇಕ ಅಂಗಡಿ ಮುಂಗಟ್ಟುಗಳು ವ್ಯಾಪಾರ ವಹಿವಾಟಿನಲ್ಲಿ ಪಾಲ್ಗೊಂಡಿದ್ದವು.
ಶಾಲಾ ಕಾಲೇಜುಗಳು ಎಂದಿನಂತೆ ನಡೆದವು. ನಗರದಲ್ಲಿ ಪೊಲೀಸ್ ಬಂದೂಬಸ್ತ್ ಮಾಡಲಾಗಿತ್ತು.
ಕನ್ನಡ ಮಹಾಸಭಾ ರಾಜ್ಯಾಧ್ಯಕ್ಷ ಚಾ.ರಂ.ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಕೆಲ ಚಳವಳಿಗಾರರು ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿ ಮಹಾರಾಷ್ಟ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ, ಎಂ.ಇ.ಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಒತ್ತಾಯಿಸಿ ಟಮೋಟೊ ಹೊಡೆಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಡಿ.ಕೆ.ಶಿವಕುಮಾರ್ ನೃತೃತ್ವದಲ್ಲಿ ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ನಡೆದ ಹೋರಾಟಕ್ಕೆ ಜನರ ಬೆಂಬಲ ಬೇಕು, ನಾಡು ನುಡಿ, ಭಾಷೆ ಸಂಸ್ಕೃತಿ ಉಳಿವಿಗಾಗಿ ಕನ್ನಡ ಪರ ಸಂಘಟನೆಗಳು ನಡೆಸುವ ಬಂದ್ ಗೆ ಡಿ.ಕೆ.ಶಿವಕುಮಾರ್ ಬೆಂಬಲ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.