ವಿಪ್ ಉಲ್ಲಂಘನೆ | ಗುಂಡ್ಲುಪೇಟೆ ಪುರಸಭೆಯ ಐವರು ಬಿಜೆಪಿ ಸದಸ್ಯರು ಅನರ್ಹ; ಜಿಲ್ಲಾಧಿಕಾರಿಗಳ ನ್ಯಾಯಾಲಯದಿಂದ ಆದೇಶ

ಚಾಮರಾಜನಗರ : ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಿಂದ ಜಿಲ್ಲೆಯ ಗುಂಡ್ಲುಪೇಟೆ ಪುರಸಭೆಯ ಬಿಜೆಪಿ ಪಕ್ಷದ ಐವರು ಸದಸ್ಯರನ್ನು ಅನರ್ಹಗೊಳಿಸಿ ಆದೇಶಿಸಲಾಗಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷದ ವಿಪ್ ಆದೇಶ ಉಲ್ಲಂಘಿಸಿದ ಆರೋಪದಡಿ ಬಿಜೆಪಿಯ ಐವರು ಪುರಸಭಾ ಸದಸ್ಯರ ಸದಸ್ಯತ್ವವನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಚಾಮರಾಜನಗರ ಜಿಲ್ಲಾಧಿಕಾರಿ ನ್ಯಾಯಾಲಯದ ನ್ಯಾಯಾಧೀಶರಾದ ಶಿಲ್ಪಾನಾಗ್ ಅವರು ಗುಂಡ್ಲುಪೇಟೆ ಪುರಸಭೆಯ ಸದಸ್ಯರಾದ ಜಿ.ಎಸ್.ಕಿರಣ್, ಹೀನಾ ಕೌಸರ್, ರಾಣಿ ಲಕ್ಷ್ಮೀದೇವಿ, ರಮೇಶ್ ಹಾಗೂ ವೀಣಾ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶಿಸಿದ್ದಾರೆ.
ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ 2024ರ ಸೆಪ್ಟೆಂಬರ್ 11 ರಂದು ಚುನಾವಣೆ ನಡೆದಿತ್ತು. ಅಧಿಕಾರ ಹಿಡಿಯಲು 13 ಮತಗಳು ಬೇಕಾಗಿತ್ತು, ಬಿಜೆಪಿಗೆ ಅಧಿಕಾರ ಹಿಡಿಯುವ ಸದಸ್ಯರ ಬಲ ಇದ್ದರೂ ಸಹ ಕಾಂಗ್ರೆಸ್ ಪರ ಇಬ್ಬರು ಮತ ಚಲಾಯಿಸಿ ಮೂವರು ಗೈರಾಗಿದ್ದರು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ 8, ಎಸ್‌ಡಿಪಿಐ 1, ಪಕ್ಷೇತರ 1 ಮತ, ಶಾಸಕ, ಸಂಸದರ ತಲಾ ಒಂದು ಮತಗಳು ಕಾಂಗ್ರೆಸ್ ಪಾಲಾದ ಹಿನ್ನೆಲೆ ಪುರಸಭೆ ಗದ್ದುಗೆಯನ್ನು ಕಾಂಗ್ರೆಸ್ ಹಿಡಿದಿತ್ತು.
ಚುನಾವಣೆಯ ಸಂಬಂಧ ಬಿಜೆಪಿ ಪಕ್ಷ ತನ್ನ ಬೆಂಬಲಿತ ಪುರಸಭೆ ಸದಸ್ಯರಿಗೆ ವಿಪ್ ಆದೇಶ ನೀಡಿತ್ತು, ಆದರೂ ಕೂಡ ಬಿಜೆಪಿ ಸದಸ್ಯರಾದ ಜಿ.ಎಸ್.ಕಿರಣ್ ಹಾಗೂ ಹೀನಾ ಕೌಸರ್ ಕಾಂಗ್ರೆಸ್‌ಗೆ ಮತ ಹಾಕಿ ವಿಫ್ ಉಲ್ಲಂಘಿಸಿದರು. ರಾಣಿ ಲಕ್ಷ್ಮೀದೇವಿ, ರಮೇಶ್ ಹಾಗೂ ವೀಣಾ ಅವರು ಚುನಾವಣೆಗೆ ಗೈರುಹಾಜರಾಗಿದ್ದರು. ಹೀಗಾಗಿ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು. ಬಿಜೆಪಿ ಪಕ್ಷದ ವಿಫ್ ಉಲ್ಲಂಘನೆ ಸಂಬಂಧ ಬಿಜೆಪಿ ಪಕ್ಷದಡಿ ಚುನಾಯಿತರಾಗಿದ್ದ ಜಿ.ಎಸ್.ಕಿರಣ್, ಹೀನಾ ಕೌಸರ್, ರಾಣಿ ಲಕ್ಷ್ಮೀದೇವಿ, ರಮೇಶ್ ಹಾಗೂ ವೀಣಾ ಸೇರಿ ಐವರ ವಿರುದ್ಧ ಎಫ್ ಉಲ್ಲಂಘಿಸಿದ್ದಾರೆಂದು ಬಿಜೆಪಿಯ ಪುರಸಭೆ ಸದಸ್ಯ ಹಾಗೂ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಎಸ್.ಕುಮಾರ್ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.
ದೂರಿನ ಅರ್ಜಿಯನ್ನು ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳು ಐವರು ಸದಸ್ಯರಿಗೆ ನೋಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರು.
ನಂತರ ಪ್ರಕರಣ ಸಂಬಂಧ ನಡೆದ ವಿಚಾರಣೆಯನ್ನು ಆಲಿಸಿದ ಜಿಲ್ಲಾಧಿಕಾರಿ ಶಿಲ್ಲಾನಾಗ್ ಅವರು ಐವರು ಸದಸ್ಯರನ್ನು ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದಾರೆ.