ಬಂಡೀಪುರ ಅರಣ್ಯದೊಳಗೆ ರಾತ್ರಿ ವಾಹನಗಳ ಸಂಚಾರ ನಿಷೇಧಕ್ಕೆ ಆಗ್ರಹ
'ಬಂಡೀಪುರದೆಡೆಗೆ ನಮ್ಮ ನಡಿಗೆ' ಅಭಿಯಾನಕ್ಕೆ ಚಾಲನೆ

ಚಾಮರಾಜನಗರ : ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದೊಳಗೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನಗಳಿಗೆ ಸಂಚಾರಕ್ಕೆ ಅನುಮತಿ ನೀಡಬಾರದು, ಹಿಂದಿನಂತೆ ನಿರ್ಬಂಧ ಆದೇಶ ಮುಂದುವರಿಸುವಂತೆ ಒತ್ತಾಯಿಸಿ ಪರಿಸರವಾದಿಗಳ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಕಾಡಂಚಿನ ಗ್ರಾಮಸ್ಥರು, ಯುವಕರು 'ಬಂಡೀಪುರದೆಡೆಗೆ ನಮ್ಮ ನಡಿಗೆ' ಅಭಿಯಾನಕ್ಕೆ ಚಾಲನೆ ನೀಡಿದರು.
ಬಂಡೀಪುರದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಪ್ರಯತ್ನಿಸುತ್ತಿರುವ ಕೇರಳ ರಾಜ್ಯ ಸರಕಾರದ ಕ್ರಮಕ್ಕೆ ಮಣಿದ ವಯನಾಡ್ ನ ಸಂಸದೆ ಪ್ರಿಯಾಂಕ ಗಾಂಧಿಯವರ ಹೇಳಿಕೆಗೆ ಪುಷ್ಟಿ ನೀಡುವಂತೆ ಕರ್ನಾಟಕ ಸರಕಾರವು ಪರೋಕ್ಷವಾಗಿ ಸಹಮತ ವ್ಯಕ್ತಪಡಿಸಿದ್ದನ್ನು ಖಂಡಿಸಿ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಗ್ಗಳದ ಹುಂಡಿಯಿಂದ ಬಂಡೀಪುರಕ್ಕೆ ಪರಿಸರವಾದಿಗಳು, ಕಾಡಂಚಿನ ಗ್ರಾಮಸ್ಥರು ಮತ್ತು ಯುವಕರು ಬಂಡೀಪುರ ಉಳಿಸಿ ಅಭಿಯಾನದಲ್ಲಿ ಭಾಗವಹಿಸಿದ್ದರು.
ಎ.6ರಂದು ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಪರಿಸರ ಪ್ರೇಮಿಗಳು ಬಂಡೀಪುರ ಉಳಿಸಿ ಅಭಿಯಾನಕ್ಕೆ ತೀವ್ರತರ ಬೆಂಬಲ ವ್ಯಕ್ತಪಡಿಸಿ ಪಾದಯಾತ್ರೆ ಮೂಲಕ ಬಂಡೀಪುರದ ಮದ್ದೂರು ಚೆಕ್ ಪೋಸ್ಟ್ ಕಡೆ ತೆರಳಿ ಪಾದಯಾತ್ರಿಗಳು ರಾತ್ರಿ ಸಂಚಾರ ಆರಂಭಿಸದಿರಲು ಒಕ್ಕೂರಲಿನಿಂದ ತೀರ್ಮಾನಿಸಿದರು.
ಅಭಿಯಾನದಲ್ಲಿ ಪರಿಸರ ತಜ್ಞ ಜೋಸೆಫ್ ಹೂವಾರ, ನಿವೃತ್ತ ಬಂಡೀಪುರ ಸಿಎಫ್ ಬಾಲಚಂದ್ರ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಭಾಗ್ಯರಾಜ್ ಹಳ್ಳಿಕೆರೆ ಹುಂಡಿ ಸೇರಿದಂತೆ ಸಾವಿರಾರು ಮಂದಿ ಭಾಗಿಯಾಗಿದ್ದರು.
ಪಾದಯಾತ್ರೆಯಂದ ಕರ್ನಾಟಕ ಮತ್ತು ಕೇರಳ ನಡುವೆ ಕೆಲ ಹೊತ್ತು ವಾಹನ ಸಂಚಾರ ಅಸ್ತವ್ಯಸ್ಥ ಗೊಂಡಿತ್ತು. ಗುಂಡ್ಲುಪೇಟೆ ಪೊಲೀಸರು ಬಂದೂ ಬಸ್ತ್ ಮಾಡಿದ್ದರು.
ವಿವರ: ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿಯಲ್ಲಿದ್ದು, ದೇಶದಲ್ಲೇ ಹುಲಿಗಳ ಸಂತತಿಯಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ, ಅದರೊಂದಿಗೆ ಆನೆಗಳ ಸಂಖ್ಯೆಯು ಹೆಚ್ಚಾಗಿದೆ. 2009ರಲ್ಲಿ ಅಂದಿನ ಜಿಲ್ಲಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಬಂಡೀಪುರ ಮೂಲಕ ತಮಿಳುನಾಡು ಮತ್ತು ಕೇರಳಕ್ಕೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6 ರ ತನಕ ವಾಹನ ಸಂಚಾರ ನಿಷೇಧಿಸಿ ಆದೇಶಿಸಿದ್ದರು.
ಜಿಲ್ಲಾಧಿಕಾರಿ ಆದೇಶ ಪ್ರಶ್ನಿಸಿ ಅಂದಿನ ಕೇರಳ ಸರಕಾರವು ಸುಪ್ರಿಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದು, ಅಲ್ಲಿಯೂ ಸಹ ಜಿಲ್ಲಾಧಿಕಾರಿ ಆದೇಶವನ್ನು ಎತ್ತಿ ಹಿಡಿಯಲಾಯಿತು. ಅಂದಿನಿಂದ ಇಂದಿನ ತನಕ ಬಂಡೀಪುರ ಮಾರ್ಗವಾಗಿ ತಮಿಳುನಾಡು ಮತ್ತು ಕೇರಳಕ್ಕೆ ರಾತ್ರಿ ವೇಳೆ ವಾಹನಗಳ ಸಂಚಾರ ಸ್ಥಗಿತಗೊಂಡಿದೆ.
2024ರಲ್ಲಿ ನಡೆದ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಿಯಾಂಕ ಗಾಂಧಿಯವರು ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಭರವಸೆ ನೀಡಿದ್ದರು. ಇದೀಗ ಸಂಸದೆ ಪ್ರಿಯಾಂಕ ಗಾಂಧಿಯವರ ಮಾತು ಮುನ್ನೆಲೆಗೆ ಬಂದಿದ್ದು, ಬಂಡೀಪುರದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ಆರಂಭಿಸಲು ಕೇರಳ ಸರಕಾರವು ಪರೋಕ್ಷವಾಗಿ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆದ್ದುಕೊಂಡ ಕರ್ನಾಟಕದ ಪರಿಸರವಾದಿಗಳು ಬಂಡೀಪುರ ಮಾರ್ಗವಾಗಿ ರಾತ್ರಿ ವೇಳೆ ವಾಹನ ಸಂಚಾರ ತೆರವಿಗೆ ತೀವ್ರವಾದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಇದಕ್ಕೆ ನಿವೃತ್ತ ಅರಣ್ಯಾಧಿಕಾರಿಗಳು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ