ನೀವು ನನಗೂ ಚಪ್ಪಾಳೆ ತಟ್ಟೋದು, ಬಿಜೆಪಿಯವರ ಮಾತಿಗೂ ಚಪ್ಪಾಳೆ ತಟ್ಟೋದನ್ನು ನಿಲ್ಲಿಸಿ: ಸಿದ್ದರಾಮಯ್ಯ
ಚಾಮರಾಜನಗರ ಜಿಲ್ಲಾ ಕನಕ ಸಮುದಾಯ ಭವನಕ್ಕೆ ಶಿಲಾನ್ಯಾಸ ನೆರವೇರಿಸಿ ಸಿಎಂ ಕಿವಿಮಾತು

ಚಾಮರಾಜನಗರ: "ನಿಮಗೆ ಸೈದ್ಧಾಂತಿಕವಾಗಿ ಸ್ಪಷ್ಟ ತಿಳುವಳಿಕೆ ಇರಬೇಕು. ನೀವು ನನಗೂ ಚಪ್ಪಾಳೆ ತಟ್ಟೋದು, ಸಾಮಾಜಿಕ ನ್ಯಾಯದ ವಿರೋಧಿ ಆಗಿರುವ ಬಿಜೆಪಿಯವರ ಮಾತಿಗೂ ಚಪ್ಪಾಳೆ ತಟ್ಟೋದನ್ನು ನಿಲ್ಲಿಸಿ, ನಮ್ಮ ಪರವಾಗಿ ಇರುವವರು ಯಾರು ಎಂದು ತಿಳಿದು ಆಶೀರ್ವಾದ ಮಾಡಿ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಜಿಲ್ಲಾ ಕುರುಬರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಕನಕ ಸಮುದಾಯ ಭವನಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತ್ತಿದ್ದರು.
"ಸಾಮಾಜಿಕ ಸಮೀಕ್ಷೆ: ಸಂವಿಧಾನ ಬಂದು 75 ವರ್ಷಗಳೇ ಆದರೂ ಸಾಮಾಜಿಕ ನ್ಯಾಯ ಈಡೇರಿಲ್ಲ. ಅವಕಾಶ ವಂಚಿತ ಸಮುದಾಯಗಳ ಆರ್ಥಿಕ, ಸಾಮಾಜಿಕ ಸ್ಥಿತಿ ಗತಿ ಅರಿಯಲು ಸಮೀಕ್ಷೆ ನಡೆಸಿದ್ದೇವೆ. 2015 ರಲ್ಲಿ ನಡೆಸಿದ ಸಮೀಕ್ಷೆ ಬಳಿಕ ಬಂದ ಮುಖ್ಯಮಂತ್ರಿಗಳು ಸ್ವೀಕರಿಸಿಲ್ಲ. ನಾನು ಸ್ವೀಕರಿಸಿ ಕ್ಯಾಬಿನೆಟ್ ಮುಂದೆ ಇಟ್ಟಿದ್ದೀನಿ. ಇದು ಯಾರ ವಿರುದ್ಧವೂ ಇರುವ ಸಮೀಕ್ಷೆ ಅಲ್ಲ. ಎಲ್ಲರ ಸ್ಥಿತಿ ಗತಿ ತಿಳಿಯುವ ಸಮೀಕ್ಷೆ ಮಾತ್ರ ಆಗಿದೆ ಎಂದರು.
ಬಿಜೆಪಿಯ ರಾಮಾ ಜೋಯಿಸ್ ಮೀಸಲಾತಿ ವಿರೋಧಿಸಿ ಕೋರ್ಟ್ ಗೆ ಹೋಗಿದ್ದರು. ನಿಮಗೆ ಸೈದ್ಧಾಂತಿಕವಾಗಿ ಸ್ಪಷ್ಟ ತಿಳಿವಳಿಕೆ ಇರಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಎಲ್ಲಾ ಜಾತಿ ಮತ್ತು ಎಲ್ಲಾ ಧರ್ಮದ ಬಡವರಿಗೆ ನೆರವಾಗುವ ರೀತಿಯಲ್ಲಿ ಹಾಸ್ಟೆಲ್ ಮತ್ತು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿ. ಇದರಿಂದ ಅಂಬೇಡ್ಕರ್ ಅವರ ಸಮಾನತೆಯ ಅವಕಾಶ ಈಡೇರುತ್ತದೆ ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಈಗಾಗಲೇ 2 ಕೋಟಿ ರೂಪಾಯಿಯಲ್ಲಿ 50 ಲಕ್ಷ ರೂ. ಬಿಡುಗಡೆ ಆಗಿದೆ. ಹಲವರು ದೇಣಿಗೆ ಕೂಡ ಕೊಟ್ಟಿದ್ದಾರೆ. ಇವರೆಲ್ಲರಿಗೂ ಒಳ್ಳೆಯದಾಗಲಿ ಎಂದರು.
ಸಮುದಾಯ ಭವನ ಕಟ್ಟಿ. ಆದರೆ, ಇದಕ್ಕಿಂತ ಹೆಚ್ಚಾಗಿ ಹಾಸ್ಟೆಲ್ ಮತ್ತು ಶಿಕ್ಷಣ ಸಂಸ್ಥೆ ನಿರ್ಮಿಸಿ, ಜಿಲ್ಲೆಯ ಎಲ್ಲಾ ಹಿಂದುಳಿದ ಸಮುದಾಯಗಳ ಬಡ ಮಕ್ಕಳಿಗೆ ಶೈಕ್ಷಣಿಕ ನೆರವು ದೊರಕುವಂತೆ ಮಾಡಿ ಎಂದು ಕರೆ ನೀಡಿದರು.
ಚಾಮರಾಜನಗರ ಇಷ್ಟವಾದ ಜಿಲ್ಲೆ: ನನಗೆ ಚಾಮರಾಜನಗರ ಅತ್ಯಂತ ಇಷ್ಟವಾದ ಜಿಲ್ಲೆ. ಚಾಮರಾಜನಗರಕ್ಕೆ 20 ಸಾರಿ ಬಂದು-ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮರಾಜನಗರ ಜಿಲ್ಲಾಧಿಕಾರಿಗಳ ಆವರಣದಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣನವರ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಿದರು. ಬಳಕ ವಾಲ್ಮೀಕಿ ಮತ್ತು ಭಗೀರಥ ಪುತ್ಥಳಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಈ ವೇಳೆ, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಂಸದ ಸುನೀಲ್ ಬೋಸ್, ಶಾಸಕ ಸಿ.ಪುಟ್ಟರಂಗಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.