ಕುಸಿಯುವ ಹಂತದಲ್ಲಿ ನೀರಿನ ಟ್ಯಾಂಕ್; ಹೊಸ ಟ್ಯಾಂಕ್ ನಿರ್ಮಾಣಕ್ಕೆ ಆಗ್ರಹ
ಚಾಮರಾಜನಗರ : ತಾಲೂಕಿನ ದೊಡ್ಡರಾಯಪೇಟೆ ಗ್ರಾಮದಲ್ಲಿ ಕಳೆದ ಐವತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಕುಡಿಯುವ ನೀರಿನ ಟ್ಯಾಂಕ್ ಕುಸಿಯುವ ಹಂತದಲ್ಲಿದ್ದು, ನೂತನ ಟ್ಯಾಂಕ್ ನಿರ್ಮಾಣಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಕೂಡ್ಲೂರು ಗ್ರಾಮ ಪಂಚಾಯತ್‌ನ ದೊಡ್ಡರಾಯಪೇಟೆ ಗ್ರಾಮದಲ್ಲಿ 1974ರಲ್ಲಿ ನಿರ್ಮಾಣಗೊಂಡಿರುವ ನೀರಿನ ಟ್ಯಾಂಕ್ ಶಿಥಿಲಗೊಂಡಿದ್ದು, ಪಿಲ್ಲರ್ ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದೇ ನೀರಿನ ಟ್ಯಾಂಕ್ ಪಕ್ಕದಲ್ಲಿ ಮತ್ತೊಂದು ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗಿದ್ದು, ಜಲ ಜೀವನ್ ಯೋಜನೆಯಡಿ ನೀರು ಭರ್ತಿ ಮಾಡಲಾಗುತ್ತಿದೆ. ಅದೂ ಅಲ್ಲದೆ ಶಿಥಿಲಗೊಂಡಿರುವ ಟ್ಯಾಂಕ್ ನಲ್ಲೂ ನೀರು ಸಂಗ್ರಹ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಶಿಥಿಲಗೊಂಡಿರುವ ನೀರಿನ ಟ್ಯಾಂಕ್‌ನಲ್ಲಿ ನೀರು ಭರ್ತಿಯಾಗುವ ವೇಳೆ ಏನಾದರೂ ಕುಸಿದು ಬಿದ್ದರೆ ಭಾರೀ ಅನಾಹುತವಾಗಲಿದೆ. ಈ ಬಗ್ಗೆ ಶಾಸಕರು ಮತ್ತು ಪಂಚಾಯತ್ ರಾಜ್ ಅಧಿಕಾರಿಗಳು ಕ್ರಮ ವಹಿಸಿ ಶಿಥಿಲವಾಗಿರುವ ನೀರಿನ ಟ್ಯಾಂಕ್‌ನ್ನು ತೆರವುಗೊಳಿಸಬೇಕಾಗಿದೆ. ದೊಡ್ಡರಾಯಪೇಟೆ ಗ್ರಾಮವು ದೊಡ್ಡ ಗ್ರಾಮವಾಗಿ ಬೆಳೆಯುತ್ತಿದ್ದು, ಜನ ಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು ಸಂಗ್ರಹಕ್ಕಾಗಿ ಶಿಥಿಲಗೊಂಡ ಟ್ಯಾಂಕನ್ನು ಕೆಡವಿ ಹೊಸ ನೀರಿನ ಟ್ಯಾಂಕ್ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.