ಛತ್ತೀಸ್ ಗಢ: ಬೇಷರತ್ ಸಂಧಾನ ಮಾತುಕತೆಗೆ ಮಾವೋವಾದಿಗಳಿಗೆ ಆಹ್ವಾನ ನೀಡಿದ ಸರಕಾರ
ಸಾಂದರ್ಭಿಕ ಚಿತ್ರ Photo: TOI
ರಾಯಪುರ: ಮಾವೋವಾದಿಗಳ ಜತೆ ಬೇಷರತ್ ಮತುಕತೆಗೆ ಛತ್ತೀಸ್ಗಢ ಸರ್ಕಾರ ಆಹ್ವಾನ ನೀಡಿದೆ. ಭೌತಿಕವಾಗಿ ಇಂಥ ಸಂಧಾನ ಸಭೆಗಳಿಗೆ ಆಗಮಿಸಲಾಗದಿದ್ದರೆ ವಿಡಿಯೊ ಕರೆಗಳ ಮೂಲಕ ಹಾಜರಾಗುವಂತೆ ಕರೆ ನೀಡಿದೆ.
"ನಕ್ಸಲೀಯರು ತಮ್ಮ ಅಹವಾಲು, ಯೋಚನೆ ಮತ್ತು ಅಪೇಕ್ಷೆಗಳನ್ನು ಅಭಿವ್ಯಕ್ತಪಡಿಸಲು ಆನ್ ಲೈನ್ ಪ್ಲಾಟ್ ಫಾರಂ ಒದಗಿಸಲು ನಾವು ಸಿದ್ಧರಿದ್ದೇವೆ. ಯುವ ನಾಯಕರ ಜತೆ ಯಾವುದೇ ಸಮಯದಲ್ಲಿ, ಷರತ್ತು ರಹಿತವಾಗಿ ಚರ್ಚೆ ನಡೆಸಲು ನಾನು ಮುಕ್ತ. ನಕ್ಸಲರು ಚರ್ಚಿಸಲು ಬಯಸುವ ಯಾವುದೇ ವಿಷಯಗಳ ಬಗ್ಗೆ ಚರ್ಚೆಗೆ ಸಿದ್ಧ. ಆದರೆ ಅವರು ಪಾಲ್ಗೊಳ್ಳುವ ಅಭಿಲಾಷೆ ಹೊಂದಿರಬೇಕು" ಎಂದು ಛತ್ತೀಸ್ಗಢ ಡಿಸಿಎಂ ವಿಜಯ ಶರ್ಮಾ ಹೇಳಿದ್ದಾರೆ.
"ಅವರು ಈ ಸಂಘಟನೆ ಸೇರಿದ ನಿರ್ಧಾರದ ಬಗ್ಗೆ ಅವರಿಗೆ ವಿಷಾದ ಇದ್ದಲ್ಲಿ ಅಥವಾ ಸಮಾಜದ ಮುಖ್ಯವಾಹಿನಿ ಜತೆ ಮರು ಸೇರ್ಪಡೆಗೊಳ್ಳಲು ಬಯಸಿದಲ್ಲಿ, ನಾನು ಅವರಿಗೆ ಸಹಾಯಹಸ್ತ ಚಾಚುತ್ತೇನೆ ಮತ್ತು ನೆಮ್ಮದಿಯ ಜೀವನ ಸಾಗಿಸಲು ಮತ್ತು ದೇಶಸೇವೆ ಮಾಡಲು ಅವಕಾಶ ಮಾಡಿಕೊಡುತ್ತೇನೆ. ಬಸ್ತರ್ ನಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಅವರು ಹೇಳಿದ್ದಾರೆ.
ಕಳೆದ ತಿಂಗಳು ಮಾವೋವಾದಿಗಳ ಇಐಡಿ ದಾಳಿ ಮತ್ತು ಹತ್ಯೆ ಘಟನೆಗಳು ಹೊಸ ಸರ್ಕಾರಕ್ಕೆ ಸವಾಲಾಗಿದ್ದು, ಭದ್ರತಾ ಪಡೆಗಳು ದಾಳಿಗೆ ಸಜ್ಜಾಗುವಂತೆ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಆದೇಶ ನೀಡಿದ್ದರು.