ಚಿಕ್ಕಮಗಳೂರು: ಕೆಎಸ್ಸಾರ್ಟಿಸಿ ಬಸ್ನ ಇಟಿಎಂ ಬ್ಲಾಸ್ಟ್; ವಾಸ್ತವಾಂಶ ಏನು?
ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು: ಚಿಕ್ಕಮಗಳೂರು - ಶೃಂಗೇರಿ - ಬೆಂಗಳೂರು - ಚಿಕ್ಕಮಗಳೂರು ಮಾರ್ಗದಲ್ಲಿ ಸಾಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ನ ಎಲೆಕ್ಟ್ರಾನಿಕ್ ಟಿಕೆಟ್ ಮೆಷಿನ್ (ಇಟಿಎಂ) ಸ್ಪೋಟ ಎಂಬ ಸುದ್ದಿ ವೈರಲ್ ಆಗಿರುವ ಬಗ್ಗೆ ಕೆಎಸ್ಸಾರ್ಟಿಸಿ ಸ್ಪಷ್ಟನೆ ನೀಡಿದೆ.
ಚಿಕ್ಕಮಗಳೂರು ಘಟಕದಲ್ಲಿ ಇಟಿಎಂ ಬ್ಲಾಸ್ಟ್ ಆಗಿರುವುದಲ್ಲ. ಬದಲಾಗಿ ನಿರ್ವಾಹಕರು ಬಿಸಿಲಿನ ತಾಪಕ್ಕೆ ಬಿಸಿಯಾಗಿದ್ದ ಬಸ್ಸಿನ ಬಾನೆಟ್ ಮೇಲೆ ತುಂಬಾ ಸಮಯ ಸದರಿ ಮೆಷಿನ್ ಅನ್ನು ಇಟ್ಟಿದ್ದರಿಂದ ಬಾನೆಟ್ ಶಾಖಕ್ಕೆ ಅದು ಕರಗಿದೆ ಎಂದು ತಿಳಿಸಿದೆ.
ಸದರಿ ಬಸ್ಸಿನ ಚಾಲಕನಾಗಿರುವ ವ್ಯಕ್ತಿ ಚಾಲಕ-ಕಂ-ನಿರ್ವಾಹಕರಾಗಿದ್ದು, ಬಸ್ಸು ಚಿಕ್ಕಮಗಳೂರು- ಶೃಂಗೇರಿ-ಬೆಂಗಳೂರು- ಚಿಕ್ಕಮಗಳೂರು ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುವಾಗ , ಮೆಷಿನ್ ಅನ್ನು ಬಸ್ಸಿನ ಬಾನೆಟ್ ಮೇಲೆ ಇಟ್ಟಿದ್ದಾರೆ. ಮೆಷೀನ್ ಗೆ ಪ್ಲಾಸ್ಟಿಕ್ ಪೌಚ್ ಹಾಕಿದ್ದರಿಂದ ಅದು ಬಾನೆಟ್ ನ ಶಾಖ ತಡೆದುಕೊಳ್ಳದೆ ಕರಗಿ ಬಾನೆಟ್ ಗೆ ಅಂಟಿಕೊಂಡಿದೆ ಇದರಿಂದ ಮೆಷಿನ್ ಗೆ ಶಾಖ ತಾಗಿ ಅದು ಕರಗಲು ಪ್ರಾರಂಭಿಸಿದೆ. ಯಾವುದೇ ಬ್ಲಾಸ್ಟ್ ಆಗಿಲ್ಲ. ಈ ಬಗ್ಗೆ ನಿರ್ವಾಹಕರಿಗೆ ಬಿಸಿಯಾದ ಬಾನೆಟ್ ಮೇಲೆ ಮೆಷಿನ್ ಅನ್ನು ಇಡದಂತೆ ಮನವರಿಕೆ ಮಾಡಲಾಗಿದೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.